ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಡೆಯ ಕ್ಷಣದಲ್ಲಿ ಕೈಗೊಂಡ ನಿರ್ಧಾರದಿಂದ ಜೆಡಿಎಸ್ ನಾಯಕರನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಖಚಿತವಾಗಿ ಗೆಲ್ಲಿಸಿಕೊಳ್ಳುವ ಸದಸ್ಯರ ಬಲವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಿವೆ.
ಬಿಜೆಪಿಯಿಂದ ಇಬ್ಬರು ಹಾಗೂ ಕಾಂಗ್ರೆಸ್ನಿಂದ ಒಬ್ಬರನ್ನು ಗೆಲ್ಲಿಸಿಕೊಳ್ಳುವ ಸರಳ ಬಹುಮತ ನೀಡಬಲ್ಲ ಸಂಖ್ಯಾಬಲ ಆಯಾ ಪಕ್ಷದಲ್ಲಿ ಇದೆ. ಅದೇ ರೀತಿ ನಿರೀಕ್ಷೆಯಂತೆಯೇ ಬಿಜೆಪಿ ಎರಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಸಂಪೂರ್ಣ ಬಹುಮತಕ್ಕೆ ಸಾಲುವಷ್ಟು ಮತ ಇಲ್ಲದಿದ್ದರೂ 32 ಸದಸ್ಯರ ಬಲ ಹೊಂದಿದ್ದ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿತ್ತು.
ಭರವಸೆ? ಕೊರತೆ ಬೀಳುವ 13 ಮತಗಳ ಹೊಂದಾಣಿಕೆಯನ್ನು ಕಾಂಗ್ರೆಸ್ ಸದಸ್ಯರ ಹೆಚ್ಚುವರಿ ಮತದ ಮೂಲಕ ಪಡೆಯಲು ಜೆಡಿಎಸ್ ತೀರ್ಮಾನಿಸಿತ್ತು. ಇದಕ್ಕೆ ಪೂರಕ ಎಂಬಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ್ದ ಕುಪೇಂದ್ರ ರೆಡ್ಡಿ ಕಾಂಗ್ರೆಸ್‌ನ ಬೆಂಬಲವನ್ನು ಕೋರಿದ್ದರು. ಕಾಂಗ್ರೆಸ್ ಪಕ್ಷ ತನ್ನ ನಿರ್ಧಾರ ತಿಳಿಸದಿದ್ದರೂ ಯೋಚಿಸುವುದಾಗಿ ಭರವಸೆ ನೀಡಿತ್ತು.
ಆದರೆ, ಈ ಮಧ್ಯೆ ದಿಢೀರ್ ಆಗಿ ಸಿದ್ದರಾಮಯ್ಯನವರು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್‌ರನ್ನು ಕಣಕ್ಕಿಳಿಸುವ ತೀರ್ಮಾನವನ್ನು ಕೈಗೊಂಡರು. ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಬೆಂಬಲ ಪಡೆದು ನಿನ್ನೆಯೇ ಅಭ್ಯರ್ಥಿಯ ಹೆಸರನ್ನು ಘೋಷಿಸಿ ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಜೊತೆಯಲ್ಲೇ ಎರಡನೇ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಇದೀಗ ಜೆಡಿಎಸ್ ಅತಿ ಹೆಚ್ಚು ಮೊದಲ ಪ್ರಾಶಸ್ತ್ಯದ ಮತದಾರರ ಬೆಂಬಲ ಹೊಂದಿರುವ ಹಿನ್ನೆಲೆ ಕುಪೇಂದ್ರ ರೆಡ್ಡಿ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಆದರೆ, ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ಬೆಂಬಲವನ್ನು ಕಾಂಗ್ರೆಸ್ ಕೋರಿದೆ.
ಈ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭ ಬೆಂಬಲ ನೀಡಿದ್ದ ಕಾಂಗ್ರೆಸ್ ತಾವು ಜಾತ್ಯಾತೀತ ಒಲವನ್ನು ಹೊಂದಿರುವ ಪಕ್ಷವಾದರೆ ಈ ಬಾರಿ ನಮ್ಮನ್ನು ಬೆಂಬಲಿಸಿ ಎಂದು ಕೇಳಿದೆ. ಒಂದೆಡೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಮತ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿಯನ್ನು ಜೆಡಿಎಸ್ ನಾಯಕರು ಸಂಪರ್ಕಿಸಿರಲಿಲ್ಲ. ಈ ಹಿನ್ನೆಲೆ ತಮ್ಮ ಹೆಚ್ಚುವರಿ ಮತಗಳ ಅನುಕೂಲ ಪಡೆದುಕೊಳ್ಳಲು ಬಿಜೆಪಿ ಸಹ ಲೇಹರ್ ಸಿಂಗ್‌ರನ್ನು ತಮ್ಮ ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.
ಸದಸ್ಯರ ಬಲಾಬಲ : ವಿಧಾನಸಭೆಯ 224 ಸದಸ್ಯರ ಪೈಕಿ ಪಕ್ಷಗಳ ಬಲಾಬಲ ಗಮನಿಸಿದಾಗ ಬಿಜೆಪಿ 122 ಸದಸ್ಯರ ಬಲ ಹೊಂದಿದೆ. ಕಾಂಗ್ರೆಸ್ 70 ಹಾಗೂ ಜೆಡಿಎಸ್ 32 ಸದಸ್ಯರ ಬಲ ಹೊಂದಿದೆ. ಇದರಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ನೀಡಿದ ಮೂವರು ಪಕ್ಷೇತರ ಸದಸ್ಯರೂ ಸೇರಿದ್ದಾರೆ. ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ತಲಾ 45 ಮತಗಳ ಅಗತ್ಯ ಇರುವ ಹಿನ್ನೆಲೆ ಬಿಜೆಪಿ ಸರಳವಾಗಿ ತಮ್ಮ ಇಬ್ಬರು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಹೆಚ್ಚುವರಿಯಾಗಿ 32 ಸದಸ್ಯರ ಬಲ ಹೊಂದಲಿದೆ. ಇನ್ನೂ ಕಾಂಗ್ರೆಸ್ ತನ್ನ ಒಬ್ಬ ಸದಸ್ಯರ ಗೆಲುವಿನ ನಂತರ ಹೆಚ್ಚುವರಿ 25 ಮತಗಳನ್ನು ಹೊಂದಲಿದೆ. ಜೆಡಿಎಸ್ ಒಟ್ಟು 32 ಸದಸ್ಯರ ಬಲ ಹೊಂದಿದೆ.
ಇದೀಗ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯನ್ನು ಹಾಗೂ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸಿರುವ ಮೂವರೂ ಸದಸ್ಯರಿಗೆ ಸಂಪೂರ್ಣ ಬಹುಮತಕ್ಕೆ ಮತಗಳ ಕೊರತೆ ಎದುರಾಗಲಿದೆ. ದ್ವಿತೀಯ ಹಾಗೂ ತೃತೀಯ ಪ್ರಾಶಸ್ತ್ಯದ ಮತಗಳ ಅನಿವಾರ್ಯವಾಗಿದ್ದು, ರಾಜ್ಯಸಭೆ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ
ಸರಳವಾಗಿ ಕಾಂಗ್ರೆಸ್ ಬೆಂಬಲ ಪಡೆದು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಚಿಂತನೆ ನಡೆಸಿದ್ದ ಜೆಡಿಎಸ್ಗೆ ಇದೀಗ ಸಿದ್ದರಾಮಯ್ಯ ದೊಡ್ಡ ಆಘಾತ ನೀಡಿದ್ದಾರೆ. ತಮ್ಮನ್ನು ಟೀಕಿಸುವ ಜೆಡಿಎಸ್ ನಾಯಕರಿಗೆ ಪತ್ಯುತ್ತರ ನೀಡಲು, ಈ ರೀತಿಯ ಅವಕಾಶವನ್ನು ಪಡೆದು ಸದ್ಭಳಕೆ ಮಾಡಿಕೊಳ್ಳುವ ಕಾರ್ಯ ಮಾಡಿದ್ದಾರೆ. ಸದ್ಯ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಮ್ ರಮೇಶ್ ಗೆಲುವು ಸುಲಭದ್ದಾಗಿದೆ. ಇದೀಗ ನಾಲ್ಕನೇ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಜೆಡಿಎಸ್ನ ಕುಪೇಂದ್ರ ರೆಡ್ಡಿ ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಹಾಗೂ ಕಡೆಯ ಕ್ಷಣದಲ್ಲಿ ಕಣಕ್ಕಿಳಿದಿರುವ ಬಿಜೆಪಿಯ ಲೇಹರ್ ಸಿಂಗ್ ಭವಿಷ್ಯ ನಿರ್ಧಾರವಾಗಬೇಕಿದೆ.
ಜಮೀರ್ ಬಾಂಬ್ : ಈ ಮಧ್ಯೆ ನಿನ್ನೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯರ ಆಪ್ತ ಜಮೀರ್ ಅಹಮದ್, ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ ಜೆಡಿಎಸ್ ಶಾಸಕರು ಮತ ಹಾಕ್ತಾರೆ. ಜೆಡಿಎಸ್ ಶಾಸಕರು ನಮ್ಮ ಟಚ್ನಲ್ಲಿ ಇದ್ದಾರೆ. ಮುಂದೆ ನೋಡೋಣ ಅಂದಿದ್ದಾರೆ. ಅಲ್ಲಿಗೆ ಆರು ವರ್ಷಗಳ ಹಿಂದೆ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಏಳು ಶಾಸಕರು ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದರು. ಅವರಲ್ಲಿ ಒಬ್ಬ ಸದಸ್ಯ ಇದೀಗ ಮತ್ತೆ ಜೆಡಿಎಸ್‌ನಿಂದ ಅಡ್ಡಮತದಾನ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.