ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಆರಂಭವಾಗಿದೆ. ವಿವಿಧ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಸಭೆ ಕರೆದಿದ್ದು, ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸಭೆ ಆರಂಭವಾಗಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ಟಿಬಿ ಜಯಚಂದ್ರ, ಪ್ರಿಯಾಂಕ್ ಖರ್ಗೆ, ಶಿವಶಂಕರ್ ರೆಡ್ಡಿ, ರಾಮಲಿಂಗಾರೆಡ್ಡಿ, ಎಂ. ಕೃಷ್ಣಪ್ಪ, ಕೃಷ್ಣಬೈರೇಗೌಡ, ಕೆ ಬಿ ಕೋಳಿವಾಡ ಹಾಗೂ ಮುಖಂಡರಾದ ಬಿಕೆ ಹರಿಪ್ರಸಾದ್ ನಾರಾಯಣಸ್ವಾಮಿ, ಸಿಎಂ ಇಬ್ರಾಹಿಂ ಮತ್ತಿತರ ನಾಯಕರು ಭಾಗವಹಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ, ಕೊರೊನಾ ನಿಯಂತ್ರಣದಲ್ಲಿ ಕಂಡಿರುವ ವೈಫಲ್ಯ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟಗಳು, ಮಹಾಮಾರಿ ನಿಯಂತ್ರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ.
ಹಿರಿಯ ಕಾಂಗ್ರೆಸ್ ನಾಯಕರು ನೀಡುವ ಅಭಿಪ್ರಾಯವನ್ನು ಆಧರಿಸಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮುಂದಿನ ಹೋರಾಟದ ರೂಪುರೇಷೆ ಹೆಣೆಯಲಿದ್ದಾರೆ.