ಬೆಂಗಳೂರು: ಇಂದು ನಿಗದಿಯಾಗಿದ್ದ ಬಿಬಿಎಂಪಿ ಕೌನ್ಸಿಲ್ ಸಭೆ ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆಯಾಗಿದೆ. ಸಭೆಗೆ ಬಂದ ಉಪಮೇಯರ್ ರಾಮ್ ಮೋಹನ್ ರಾಜು ಸಭೆ ಮುಂದೂಡಿಕೆಯಾಗಿದೆ ಎಂದು ಘೋಷಣೆ ಮಾಡಿದರು.
ಈ ವೇಳೆ ರೊಚ್ಚಿಗೆದ್ದ ವಿಪಕ್ಷ ನಾಯಕ ವಾಜಿದ್, ನಿಗದಿಯಾದ ಸಭೆ ದಿಢೀರ್ ಅಂತ ಮುಂದೂಡೋದು ಯಾಕೆ, ಸರಿಯಾದ ಕಾರಣ ಕೊಡಿ. ಚುನಾವಣೆ ಬಗ್ಗೆ ಚರ್ಚೆ ಆಗ್ಬೇಕು. ಆದ್ರೆ ಮೇಯರ್ ಆಯುಕ್ತರು ಯಾರೂ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪೌರಸಭಾಂಗಣದ ಮುಂಭಾಗ ಕಾಂಗ್ರೆಸ್ ಸದಸ್ಯರು, ಬಿಜೆಪಿಯ ಆಡಳಿತ ವೈಫಲ್ಯ ಎಂದು ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಲ್ಯಾಪ್ ಟಾಪ್ ಖರೀದಿಗೆ ಸರ್ಕಾರ ಹಾಗೂ ಆಯುಕ್ತರಿಂದ ತಡೆ ನೀಡಲಾಗಿದ್ದು, ಒಂದೆಡೆ ಲ್ಯಾಪ್‌ಟಾಪ್ ಖರೀದಿಸಲು ಅಧಿಕಾರಿಗಳು ಸಹಿ ಹಾಕ್ತಾರೆ. ಮತ್ತೊಂದು ಕಡೆ ಅಧಿಕಾರಿಗಳೆ ಲ್ಯಾಪ್‌ಟಾಪ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾರೇ. ಮೇಯರ್ ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಸರ್ಕಾರಕ್ಕೆ ಪತ್ರ ಬರೀತಾರೆ, ಏನಾಗಿದೆ ಇವರ ಆಡಳಿತಕ್ಕೆ ಎಂದು ವಾಜಿದ್ ಅಸಮಾಧಾನ ಹೊರಹಾಕಿದರು.
ಒಂದೆಡೆ ಭ್ರಷ್ಟಾಚಾರ, ಇನ್ನೊಂದೆಡೆ ಕೋವಿಡ್ ಇದ್ಯಾವುದಕ್ಕೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಪ್ಟೆಂಬರ್ 10 ಕೊನೆಯ ದಿನ ಆದರೂ, ಚುನಾವಣೆ ನಡೆಸುವ ಬಗ್ಗೆ ಯೋಚನೆ ಇಲ್ಲ. ಸಭೆಯಲ್ಲಿ ಚುನಾವಣೆ ಬಗ್ಗೆ ಚರ್ಚೆ ಮಾಡ್ಬೇಕು ಅಂತ ಇದ್ದೆವು. ಬಡವರಿಗೆ ಶಿಕ್ಷಣ ಸಿಗುವುದು ಬೇಡ್ವಾ, ಆನ್ ಲೈನ್ ಶಿಕ್ಷಣಕ್ಕೆ ಲ್ಯಾಪ್ ಟಾಪ್ ಅಗತ್ಯ ಇದೆ. ಈ ಬಗ್ಗೆ ಚರ್ಚೆ ಆಗಬೇಕು, ಆದರೆ ಯಾವುದೇ ಕಾರಣ ಕೊಡದೆ ಸಭೆ ಮುಂದೂಡಿದರು ಎಂದು ಆಕ್ರೋಶ ಹೊರಹಾಕಿದರು.