ಬೆಂಗಳೂರು : ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಕೈಗೊಂಡ ಕಾಂಗ್ರೆಸ್ ನಿನ್ನೆ ರಾತ್ರಿ ಚಿಂತನ-ಮಂಥನ ಸಭೆ ನಡೆಸಿದೆ. ಈ ವೇಳೆ ಕೈ ಶಾಸಕರು ಸಿದ್ದರಾಮಯ್ಯ-ಡಿಕೆಶಿಗೆ ಒಗ್ಗಟ್ಟಿನ ಸಲಹೆ ನೀಡಿದರು.
ಅಹೋರಾತ್ರಿ ಧರಣಿ ವೇಳೆ ಚಿಂತನ-ಮಂಥನ ಸಭೆ ನಡೆಸಲಾಗಿದೆ. ಆ ವೇಳೆ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ. ಒಗ್ಗಟ್ಟಾಗಿ ಮುಂದುವರಿಯಿರಿ ಎಂದು ಸಿದ್ದು-ಡಿಕೆಶಿಗೆ ಕಾಂಗ್ರೆಸ್ ಶಾಸಕರು ಸಲಹೆ ನೀಡಿದರು. 2023ರ ಚುನಾವಣೆ ಗೆಲ್ಲಲು ನಿಮ್ಮಿಬ್ಬರ ಒಗ್ಗಟ್ಟು ಪ್ರದರ್ಶನ ಅಗತ್ಯ ಎಂದು ಮನವರಿಕೆ ಮಾಡಿಕೊಟ್ಟರು.
ನಾಯಕರಿಗೆ ಶಾಸಕರ ಮನವಿ : ಬೃಹತ್ ಭ್ರಷ್ಟಾಚಾರ ಅಸ್ತ್ರಗಳ ಜೊತೆಗೆ ನೀವಿಬ್ಬರು ಒಂದಾಗಿ ನಮ್ಮ ಕ್ಷೇತ್ರಗಳಿಗೆ ಬಂದ್ರೆ ಚುನಾವಣೆ ಗೆಲ್ಲಬಹುದು. ಆದ್ರೆ, ನೀವಿಬ್ಬರು ಒಂದಾಗಿ ಹೆಜ್ಜೆ ಇಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ನಾವು ಗೆಲ್ಲೋದು ಕಷ್ಟ. ಸರ್ಕಾರದ ವೈಫಲ್ಯಗಳಿಗಿಂತಲೂ ನಿಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳೇ ಹೆಚ್ಚು ಸುದ್ದಿ ಆಗ್ತಿವೆ. ನೀವಿಬ್ಬರೂ ಒಂದಾಗಿ ಮತ್ತೆ ನಾವು ವಿಧಾನಸಭೆಗೆ ಬರುವ ರೀತಿ ಮಾಡಿ ಎಂದು ಶಾಸಕರು ಉಭಯ ನಾಯಕರಿಗೆ ಮನವಿ ಮಾಡಿದರು.
ಸಿದ್ದು-ಡಿಕೆಶಿ ಸೂಚನೆ : ಇನ್ನೂ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಶಾಸಕರಿಗೆ ಹಲವು ಸಲಹೆ, ಸೂಚನೆ ನೀಡಿದರು. ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇದೆ. ಚುನಾವಣೆಗೆ ಇಂದಿನಿಂದಲೇ ಸಿದ್ಧತೆ ಶುರು ಮಾಡಿ. ಸರ್ಕಾರದ ಅನುದಾನ ತಾರತಮ್ಯ, ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆ, ಕೋವಿಡ್ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿಯನ್ನು ಜನರ ಗಮನಕ್ಕೆ ತನ್ನಿ.
ಬಿಜೆಪಿ ಆಡಳಿತದ ವಿಚಾರವನ್ನು ಜನರ ಗಮನಕ್ಕೆ ತನ್ನಿ. ಕ್ಷೇತ್ರ ಬಿಡಬೇಡಿ, ಇನ್ನೊಂದು ವರ್ಷ ಕ್ಷೇತ್ರದಲ್ಲಿ ಸಂಚಾರ ಮಾಡಿ. ಮತದಾರನ ಮನೆ ಬಾಗಿಲಿಗೆ ನೀವು ಹೋಗಿ. ಪಂಚರಾಜ್ಯಗಳ ಚುನಾವಣೆ ಬಳಿಕ ರಾಜ್ಯದ ಚಿತ್ರಣ ಬದಲಾಗುತ್ತದೆ. ಎಚ್ಚೆತ್ತು ಕೆಲಸ ಮಾಡಿ ಎಂದು ಶಾಸಕರಿಗೆ ಸಿದ್ದು, ಡಿಕೆಶಿ ಸೂಚನೆ ನೀಡಿದರು.
ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ : ಈ ವೇಳೆ ಸಿದ್ದರಾಮಯ್ಯ ಅವರು ಶಾಸಕರ ಜತೆಗೆ ಮಾತಾಡ್ತಾ, ಡಿಕೆಶಿ- ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಒಂದಾಗಿ ಹೋಗ್ತಿದ್ದೇವೆ. ಎಲ್ಲವೂ ಮಾಧ್ಯಮಗಳ ಸೃಷ್ಟಿ ಅಷ್ಟೇ.. ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ತಿಳಿಸಿದರು. ಬಳಿಕ ಮಾತನಡಿದ ಡಿಕೆಶಿ, ನನಗೆ ಯಾವುದೇ ವೈಯಕ್ತಿಕ ಲಾಭ ಮಾಡಿಕೊಳ್ಳುವ ಉದ್ದೇಶ ಇಲ್ಲ. ಯಾರೋ ಬೆಂಬಲಿಗರು ಮಾತನಾಡಿದ್ದನ್ನು ಸುದ್ದಿ ಮಾಡ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ತಿಳಿಸಿದರು.