ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆ ದಾಖಲಾಗಿರುವ ಪ್ರಕರಣಗಳ ಸಂಬಂಧ ಕೂಲಂಕಷ ತನಿಖೆ ನಡೆಸಲು ಕೆಪಿಸಿಸಿ ಕಾನೂನು ಘಟಕದ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗ ಈ ವಿಶೇಷ ಸಮಿತಿಯನ್ನು ರಚನೆ ಮಾಡಿದೆ. ಅಧ್ಯಕ್ಷರ ಸೂಚನೆ ಮತ್ತು ಅನುಮೋದನೆಯ ಅನುಸಾರ ಸಮಿತಿ ರಚನೆಯಾಗಿದೆ.
ಮೇಕೆದಾಟು ಪಾದಯಾತ್ರೆಗೆ ಸಂಬಂಧಪಟ್ಟಂತೆ ದಾಖಲಾಗಿರುವ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಮತ್ತು ಪರಿಶೀಲಿಸಿ ಎಲ್ಲ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ವರದಿ ತಯಾರಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.
ಕೆಪಿಸಿಸಿ ರಚಿಸಿರುವ ವಿಶೇಷ ಸಮಿತಿಯಲ್ಲಿ 50 ಸದಸ್ಯರಿದ್ದಾರೆ. ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕುಗಳ ಮತ್ತು ಆರ್ಟಿಐ ಘಟಕದ ಮಾಜಿ ಅಧ್ಯಕ್ಷ ಸಿಎಂ ಧನಂಜಯ್, ರಾಜ್ಯ ಹೈಕೋರ್ಟ್ ಹಿರಿಯ ವಕೀಲರಾದ ಹೆಚ್.ಸಿ.ಚಂದ್ರಮೌಳಿ, ಎ.ಜಿ.ಶಿವಣ್ಣ, ಕೆ.ದಿವಾಕರ, ರಾಜ್ಯ ವಕೀಲರ ಪರಿಷತ್ ಸದಸ್ಯ ಮುನಿಯಪ್ಪ ಅವರನ್ನ ತಕ್ಷಣಕ್ಕೆ ಅನ್ವಯವಾಗುವಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲ ಎಫ್ಐಆರ್ಗಳ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ, ಕಾನೂನು ಕ್ರಮ ಮತ್ತು ಹೋರಾಟದ ಬಗ್ಗೆ ಈ ಉನ್ನತ ಸಮಿತಿಯು ಮೂರು ದಿನಗಳ ಒಳಗೆ ವರದಿ ಸಲ್ಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರ ಪರವಾಗಿ ಕಾನೂನು ಹಾಗೂ ಮಾನವ ಹಕ್ಕುಗಳ ಮತ್ತು ಆರ್ಟಿಐ ಘಟಕದ ಅಧ್ಯಕ್ಷ ಎಜಿ ಪೊನ್ನಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಇದನ್ನೂ ಓದಿ: ವ್ಯಕ್ತಿಯ ಒಪ್ಪಿಗೆ ಪಡೆಯದೇ ಬಲವಂತದ ಲಸಿಕೆ ಹಾಕುವಂತಿಲ್ಲ: ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ)