ಬೆಂಗಳೂರು: ಕಲಬುರಗಿ ಪಾಲಿಕೆ ಅಧಿಕಾರ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆ ನಾನು ಮಾತನಾಡಿದ್ದೇನೆ. ಜಾತ್ಯಾತೀತ ಪಕ್ಷಕ್ಕೆ ಬೆಂಬಲಕೊಡಿ ಎಂದಿದ್ದೇನೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಾವು 27 ಸ್ಥಾನ ಗೆದ್ದಿದ್ದೇವೆ, ಅವರು 23 ಗೆದ್ದಿದ್ದಾರೆ. ಬಿಜೆಪಿಯವರು ಬೇರೆ ಮಾರ್ಗದಲ್ಲಿ ಹೊರಟಿದ್ದಾರೆ. ಆದರೆ ನಾನು ದೇವೇಗೌಡರ ಜತೆ ಸಮಾಲೋಚನೆ ನಡೆಸಿದ್ದೇನೆ. ಅವರೂ ತಮ್ಮ ಪಕ್ಷದ ಜೊತೆ ಮಾತನಾಡ್ತೇನೆ ಎಂದಿದ್ದಾರೆ. ನಮಗೆ ವಿಶ್ವಾಸವಿದೆ, ಅವರು ಸಹಾಯ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್‌ಗೆ ಮೇಯರ್ ಸ್ಥಾನ ಕೊಡಬೇಕೆಂಬ ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ನಾನು ಮಾತನಾಡಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ನೊಡೋಣ ಎಂದಷ್ಟೇ ಹೇಳಿದರು.
'ಮೋದಿ ಎಲ್ಲರನ್ನೂ ಹೆದರಿಸುತ್ತಿದ್ದಾರೆ': ತೈಲ ಬೆಲೆ ಏರಿಕೆ ವಿಚಾರವಾಗಿ ಸಂಸತ್ನಲ್ಲೂ ಧ್ವನಿ ಎತ್ತಿದ್ದೇವೆ. ಸೈಕಲ್ ರ್ಯಾಲಿ ಮಾಡಿದ್ದೇವೆ. ನಮ್ಮ ಧ್ವನಿಗೆ ಸಹಾಯ ಮಾಡುವವರು ಕಡಿಮೆ. ಮೋದಿ ಎಲ್ಲರಿಗೂ ಹೆದರಿಸುತ್ತಿದ್ದಾರೆ. ಮಾಧ್ಯಮದವರನ್ನೂ ಸಹ ಅವರು ಬೆದರಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಎಡಿಬಲ್ ಆಯಿಲ್ ರೇಟ್ ಹೆಚ್ಚಾಗ್ತಿದೆ. ಅಚ್ಚೇದಿನ ಆಯೇಂಗೆ ಅನ್ನುತ್ತಿದ್ದರು. ಒಂದು ಕಡೆ ರೈತರ ಕಾನೂನು ಹಿಂಪಡೆಯುತ್ತಿಲ್ಲ. ರೈತರ ಮೇಲೆ ಗೋಲಿಬಾರ್ ಮಾಡಿದ್ರು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು. ಜನರಿಗೆ ಉತ್ತಮ ಆಶ್ವಾಸನೆ ಕೊಟ್ಟರು. ಯುವಕರನ್ನು ಅನೇಕ ಬಾರಿ ಪುಸಲಾಯಿಸಿದ್ರು. ಆದರೆ ಅವರು ಮಾಡ್ತಿರೋದೇನು? ಜನರನ್ನು ಸಮಸ್ಯೆಗೆ ದೂಡಿದ್ದಾರೆ ಎಂದು ತಿಳಿಸಿದರು.
'ಸತ್ಯ ಗೊತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ': ಆಯಿಲ್ ಬಾಂಡ್ ಎಷ್ಟು ಕೋಟಿಗೆ ತೆಗೆದುಕೊಂಡಿದ್ದು? 1.34 ಲಕ್ಷ ಕೋಟಿ ಬಾಂಡ್. ಲಾಭ ಮಾಡಿದ್ದು 24 ಲಕ್ಷ ಕೋಟಿ. ಜನರಿಗೆ ಎಲ್ಲ ಸತ್ಯ ಕೂಡ ಗೊತ್ತಿದೆ. ಆದರೂ ಯಾರೂ ಮಾತನಾಡ್ತಿಲ್ಲ.
'ನಮ್ಮಲ್ಲಿ ಒಡಕು ಮೂಡಿಸಬೇಡಿ': ಕಲಬುರಗಿ ಸೇರಿದಂತೆ ಮೂರು ಪಾಲಿಕೆ ಚುನಾವಣೆ ಹಿನ್ನೆಡೆಗೆ ನಾಯಕರ ಶೀತಲ ಸಮರ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮಲ್ಲಿ ಒಡಕು ಮೂಡಿಸುವ ಕೆಲಸ ಬೇಡ. ನಾವು ಸಿದ್ಧಾಂತದ ಮೇಲೆ ಬಂದವರು. ಹಾಗಾಗಿಯೇ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೈಜೋಡಿಸಿದ್ದು. ಸೈದ್ಧಾಂತಿಕ ತಳಹದಿಯ ಮೇಲೆ ನಿಂತವರು ನಾವು. ನಮ್ಮಲ್ಲಿ ಯಾವುದೇ ಜಗಳವೂ ಇಲ್ಲ ಏನೂ ಇಲ್ಲ. ನಮ್ಮಲ್ಲಿ ಒಡಕು ಮೂಡಿಸಬೇಡಿ ಎಂದರು.