ಬೆಂಗಳೂರು: ಹೂಡಿಕೆಯಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಹಿಂದೆ ವ್ಯವಹಾರಾತ್ಮಕವಾಗಿ ಬಂಡವಾಳ ಹಿಂತೆಗೆದುಕೊಂಡ ಕಂಪನಿಗಳು ಈಗ ಮರು ಹೂಡಿಕೆ ಮಾಡಿ ಷೇರುದಾರರಿಗೆ ಉತ್ತಮ ಆದಾಯ ನೀಡುತ್ತಿವೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಬೆಂಗಳೂರಿನ ಭಾರತೀಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ ಮಾರುಕಟ್ಟೆಗಳ ಮೂಲಕ ಸಂಪತ್ತಿನ ಸೃಷ್ಟಿ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಈಗ ಹೂಡಿಕೆ ಹಿಂಪಡೆಯುವಿಕೆಯ ತತ್ತ್ವವೆಂದರೆ ಘಟಕವನ್ನು ಸ್ಥಗಿತಗೊಳಿಸುವುದಲ್ಲ, ಅದನ್ನು ಉತ್ತಮಗೊಳಿಸುವುದು ಮತ್ತು ಪರಿಣಾಮಕಾರಿಯಾಗಿ ನಡೆಸುವುದಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಬಹಳಷ್ಟು ಸ್ಟಾರ್ಟ್ ಅಪ್‌ಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದೊಂದಿಗೆ ಪಾಲುದಾರಿಕೆ ಮತ್ತು ಕೊಡುಗೆಗೆ ಆಸಕ್ತಿ ತೋರಿಸುತ್ತಿವೆ ಎಂದು ಹೇಳಿದರು.
![ಮಾರುಕಟ್ಟೆಗಳ ಮೂಲಕ ಸಂಪತ್ತಿನ ಸೃಷ್ಟಿ ಕುರಿತ ಸಮ್ಮೇಳನ](https://etvbharatimages.akamaized.net/etvbharat/prod-images/kn-bng-05-nirmala-seetharamn-finance-ministry-programme-at-iisc-7210969_10062022204747_1006f_1654874267_287.jpg)
ಕಿರುಚಿತ್ರ ಪ್ರದರ್ಶನ: ಈ ಸಂದರ್ಭದಲ್ಲಿ ಆದಾಯ ತೆರಿಗೆ ಮತ್ತು ನೇರ ತೆರಿಗೆ ಸಾಕ್ಷರತೆ ಹೆಚ್ಚಿಸುವ ನಿಟ್ಟಿನಲ್ಲಿ ಗೇಮ್ಸ್ ಮತ್ತು ಕಾಮಿಕ್ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ, ರಾಷ್ಟ್ರದ ಅಭಿವೃದ್ಧಿಗೆ ನೇರ ತೆರಿಗೆಗಳ ಕೊಡುಗೆಯ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.
75 ನಗರಗಳಿಂದ ಹಣಕಾಸು ತಜ್ಞರು ಭಾಗಿ: ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕಿಶನ್ ರಾವ್ ಕರಾಡ್ ನವದೆಹಲಿಯ ವಿಜ್ಞಾನ ಭವನದಿಂದ ಸಮಾವೇಶದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ 75 ನಗರಗಳಿಂದ ಹಣಕಾಸು ತಜ್ಞರು, ಬ್ಯಾಂಕರ್‌ಗಳು ಗೋಷ್ಠಿಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಸಿಎಂ ಬೊಮ್ಮಾಯಿ ವಿಶ್ವಾಸ