ಬೆಂಗಳೂರು/ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಪ್ರತಿಭಟನೆ ಹಿನ್ನೆಲೆ ಸದ್ಯ ಕರಾವಳಿ ನಗರಿ ಮಂಗಳೂರು ಬೂದಿ ಮುಚ್ಚಿದ ಕೆಂಡದಂತಿದೆ. ಇದರ ಬೆನ್ನಲ್ಲೇ ಇಂದು ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದ ಮೂಲಕ ಸಿಎಂ ಯಡಿಯೂರಪ್ಪ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸಿಎಂ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಮಂಗಳೂರಿಗೆ ತೆರಳಲಿದ್ದಾರೆ. ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಈಗ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಖುದ್ದು ಸಿಎಂ ಯಡಿಯೂರಪ್ಪ ಮಂಗಳೂರಿಗೆ ತೆರಳಿ ವಾಸ್ತವ ಸನ್ನಿವೇಶವನ್ನ ಅವಲೋಕಿಸಲಿದ್ದಾರೆ. ಮಂಗಳೂರಿಗೆ ತೆರಳುತ್ತಿದ್ದ ಹಾಗೇ ಮೊದಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದಾರೆ.
ಬೆಳಗ್ಗೆ 11:15ಕ್ಕೆ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸಭೆ ನಡೆಸಲಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರನ್ನು ಹಾಜರಿರಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಿಎಂ ನೇತೃತ್ವದ ಸಭೆಯಲ್ಲಿ ಶಾಸಕ ಯು.ಟಿ.ಖಾದರ್ ಸಹ ಭಾಗಿವಹಿಸುತ್ತಾರೋ ಇಲ್ವೋ ಅನ್ನೋದು ಇನ್ನೂ ಸ್ಪಷ್ಟತೆ ಇಲ್ಲ. ಯು.ಟಿ.ಖಾದರ್ ಕೊಟ್ಟ ಹೇಳಿಕೆಯಿಂದಲೇ ಈ ಗಲಭೆಯಾಗಿದೆ ಎಂದು ಸಿಎಂ ಸೇರಿದಂತೆ ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಇದೀಗ ಇಂದು ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಖಾದರ್ ಪಾಲ್ಗೊಳ್ಳುತ್ತಾರೋ, ಇಲ್ವೋ ಅನ್ನೋದನ್ನು ಕಾದು ನೋಡಬೇಕು.