ಬೆಂಗಳೂರು: ಅಂತಾರಾಜ್ಯ ಜಲ ವ್ಯಾಜ್ಯ ಸೇರಿದಂತೆ ರಾಜ್ಯದ ಯೋಜನೆಗಳ ಕುರಿತು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ನವದೆಹಲಿಗೆ ತೆರಳುತ್ತಿದ್ದು, ಕೇಂದ್ರದ ಸಚಿವರು ಮತ್ತು ರಾಜ್ಯದ ಕಾನೂನು ತಂಡದ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 1.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಪ್ರಯಾಣ ಬೆಳೆಸಲಿರುವ ಸಿಎಂ, ಸಂಜೆ 4.05ಕ್ಕೆ ದೆಹಲಿ ತಲುಪಲಿದ್ದಾರೆ. ಇಂದು ಸಂಜೆ ಕಾಲಾವಕಾಶ ನೀಡುವ ಕೇಂದ್ರ ಸಚಿವರ ಜೊತೆ ಸಭೆ ನಡೆಸಲಿರುವ ಸಿಎಂ ಬೊಮ್ಮಾಯಿ ಇಂದು ರಾತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಬೆಳಗ್ಗೆ 8 ಗಂಟೆಗೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ನಂತರ ಮತ್ತೆ ಕೇಂದ್ರ ಸಚಿವರುಗಳ ಜೊತೆ ಸಭೆ ನಡೆಸಲಿದ್ದಾರೆ. ನಾಳೆ ಸಂಜೆ 4.05ಕ್ಕೆ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ಸಿಎಂ ಸಂಜೆ 6.50ಕ್ಕೆ ಬೆಂಗಳೂರು ತಲುಪಲಿದ್ದಾರೆ.
ದೆಹಲಿಯಲ್ಲಿ ಬೊಮ್ಮಾಯಿ ಚಟುವಟಿಕೆ: ಕೇಂದ್ರದ ಆರೋಗ್ಯ, ಆರ್ಥಿಕ, ಜಲಶಕ್ತಿ, ಕೃಷಿ, ರಕ್ಷಣಾ ಸಚಿವರ ಸಮಯಾವಕಾಶ ಕೇಳಿದ್ದು, ಆಯಾ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ.
ನೀರಾವರಿಗೆ ಸಂಬಂಧಿಸಿ ಅಂತಾರಾಜ್ಯ ಜಲ ವಿವಾದಗಳ ಕುರಿತು, ಕೇಂದ್ರ ಸಚಿವರು ಮತ್ತು ಕಾನೂನು ತಜ್ಞರ ಜತೆ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಕರ್ನಾಟಕ ಪ್ರತಿನಿಧಿಸುವ ಹಿರಿಯ ವಕೀಲರೂ ಸಭೆಯಲ್ಲಿ ಇರಲಿದ್ದು, ಈಗಿರುವ ಜಲವಿವಾದಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಕೃಷ್ಣಾ, ಮಹದಾಯಿ, ಮೇಕೆದಾಟು ಯೋಜನೆಗಳ ವಿಚಾರದಲ್ಲಿ ಯಾವ ರೀತಿ ಮುಂದುವರೆಯಬೇಕು ಎನ್ನುವ ಕುರಿತು ಚರ್ಚೆ ನಡೆಸಲಿದ್ದಾರೆ.
ಹೈಕಮಾಂಡ್ ಭೇಟಿ: ದೆಹಲಿ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಯಾವಕಾಶ ಸಿಕ್ಕಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಸುಳಿವು ನೀಡಿರುವ ಸಿಎಂ ಹೈಕಮಾಂಡ್ ಸೂಚನೆಯಂತೆ ಸಂಪುಟ ವಿಸ್ತರಣೆ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಸಿಎಂ ದೆಹಲಿ ಪ್ರವಾಸಕ್ಕೆ ಸಿದ್ಧತೆ: ಬೊಮ್ಮಾಯಿ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದೌಡು