ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ನೇಮಕ ಕಾನೂನು ಬಾಹಿರ ಎಂದು ವಕೀಲರೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ಗೆ ದೂರು ನೀಡಿದ್ದಾರೆ.
ಉಮಾಪತಿ ಎಸ್. ಎಂಬುವರು ದೂರು ನೀಡಿದ್ದು, ದೂರಿನಲ್ಲಿ ಎನ್.ಆರ್.ಸಂತೋಷ್ ಅವರನ್ನು ಕಾನೂನು ಬಾಹಿರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ. ನಿಯಮದ ಪ್ರಕಾರ ಖಾಸಗಿ ವ್ಯಕ್ತಿಗೆ ಸಿಎಂ ಕಾರ್ಯದರ್ಶಿ ಹುದ್ದೆಯನ್ನು ನೀಡುವಂತಿಲ್ಲ. ಅದರಲ್ಲೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡುವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಆಪ್ತನನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸುವ ಮೂಲಕ ಸಿಎಂ ಬಿಎಸ್ವೈ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಯನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದರ ಜೊತೆಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದರಿಂದ ಅವರು ಸರ್ಕಾರದ ಪ್ರಮುಖ ಕಡತಗಳನ್ನು ಪರಿಶೀಲಿಸಬಹುದಾಗಿದೆ ಎಂದು ದೂರಿದ್ದಾರೆ.
ಈ ಸಂಬಂಧ 15 ದಿನಗಳಲ್ಲಿ ಸ್ಪಷ್ಟೀಕರಣ ನೀಡುವಂತೆ ದೂರಿನಲ್ಲಿ ಹೇಳಲಾಗಿದ್ದು, ಒಂದು ವೇಳೆ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.