ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಮತ್ತೆ ಅಧಿಕಾರ ಕಳೆದುಕೊಳ್ಳುವ ಬಗ್ಗೆ ಹೆಚ್ಚಿನ ಚರ್ಚೆಗೆ ಒಳಗಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಈ ಬಾರಿ ಸಿಎಂ ಅವರನ್ನು ಖಂಡಿತವಾಗಿಯೂ ಬದಲಾವಣೆ ಮಾಡುತ್ತದೆಯಂತೆ. ಸ್ವಾತಂತ್ರೋತ್ಸವಕ್ಕೂ ಮುಂಚೆ ಅಥವಾ ಸ್ವಾತಂತ್ರೋತ್ಸವ ಆಚರಣೆ ಮುಗಿಯುತ್ತಿದ್ದಂತೆ ನಾಯಕತ್ವ ಬದಲಾಯಿಸಲಾಗುತ್ತದೆ.. ಹೀಗೆ ಹತ್ತು ಹಲವಾರು ವದಂತಿಗಳು ರಾಜಕೀಯ ಅಂಗಳದಲ್ಲಿ ಮತ್ತು ಅಧಿಕಾರಿಗಳ ಕಾರಿಡಾರ್ನಲ್ಲಿ ದಟ್ಟವಾಗಿ ಹಬ್ಬಿದೆ.
ಸಿಎಂ ಬದಲಾವಣೆ ವದಂತಿ ಬಗ್ಗೆ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿ ಬಿಸಿ ಚರ್ಚೆ ತೆರೆ ಮರೆಯಲ್ಲಿ ನಡೆಯುತ್ತಲೇ ಇದೆ. ಆದರೆ, ಈ ವಿದ್ಯಮಾನದ ಬಗ್ಗೆ ಸಂಬಂಧ ಪಟ್ಟವರು ಇದುವರೆಗೆ ಯಾರೂ ಖಚಿತಪಡಿಸಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಹಿರಿಯ ಸಚಿವರಾದ ಆರ್ ಅಶೋಕ, ಸಿಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಡಾ. ಸಿ ಸುಧಾಕರ್ ಮತ್ತಿತರರು ಸ್ಪಷ್ಟನೆ ನೀಡುತ್ತಿದ್ದಾರಾದರೂ ಜವಾಬ್ದಾರಿ ಇರುವ ಬಿಜೆಪಿ ಹೈಕಮಾಂಡ್ ಯಾವ ಸ್ಪಷ್ಟನೇ ನೀಡದೇ ಇರುವುದರಿಂದ ವಂದಂತಿಯು ಮತ್ತಷ್ಟು ರೆಕ್ಕೆ ಪುಕ್ಕ ಪಡೆದು ಹರಡುತ್ತಿದೆ.
ಕಾಂಗ್ರೆಸ್ಗೆ ಮತ್ತೊಂದು ಅಸ್ತ್ರ: ಪ್ರತಿ ಪಕ್ಷ ಕಾಂಗ್ರೆಸ್ಗೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಟೀಕೆಗೆ ಒಂದು ಅಸ್ತ್ರವಾಗಿಯೂ ಪರಿಣಮಿಸಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಸನಗೌಡ ಯತ್ನಾಳ್ ಈ ಹಿಂದೆ ನೀಡಿದ ಮಾರ್ಮಿಕ ಹೇಳಿಕೆಗಳು ಮತ್ತು ಇತ್ತೀಚೆಗೆ ಮಾಜಿ ಶಾಸಕ ಸುರೇಶ್ ಗೌಡ ನೇರವಾಗಿ ಸಿಎಂ ಬದಲವಣೆ ಬಗ್ಗೆ ನೀಡಿದ ಹೇಳಿಕೆಗಳು ಮುಖ್ಯಮಂತ್ರಿ ಬದಲಾವಣೆಯ ವದಂತಿಯನ್ನು ದಟ್ಟವಾಗಿ ಹಬ್ಬಿಸಿದೆ.
ಸಂಚಲನ ಸೃಷ್ಟಿಸಿದ ಕಾಂಗ್ರೆಸ್ ಟ್ವೀಟ್: ಈ ನಡುವೆ ಕಾಂಗ್ರೆಸ್ ಪಕ್ಷ ಸಹ ಟ್ವೀಟ್ ಮಾಡಿ ಆಡಿಸಿ ನೋಡು ಎಂದು ಗೊಂಬೆಯಂತಿದ್ದ ಬೊಮ್ಮಾಯಿಯವರನ್ನು ಹೈಕಮಾಂಡ್ ಬೀಳಿಸಿ ನೋಡಲು ಹೊರಟಿದೆ. 'ಕೈಗೊಂಬೆ ಸಿಎಂ' ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ 'ಕತ್ತಿ ವರಸೆ' ಶುರುವಾಗಿದೆ ಎಂದರೆ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು?, ನಿಮ್ಮ ಆಡಳಿತ ವೈಫಲ್ಯವೇ? ಅಥವಾ ಬಿಜೆಪಿ ವರ್ಸಸ್ ಬಿಜೆಪಿ ಕಾದಾಟವೇ? ಅಥವಾ ಯಡಿಯೂರಪ್ಪನವರ ಕೋಪವೇ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ನ ಈ ಟ್ವೀಟ್ ಬಳಿಕ ಸಿಎಂ ಬದಲಾವಣೆ ರೂಮರ್ ಮತ್ತಷ್ಟು ಹರಡತೊಡಗಿದೆ. ಕಾಂಗ್ರೆಸ್ನ ಈ ಟ್ವೀಟ್ಗೆ ಕಂದಾಯ ಸಚಿವ ಆರ್ ಅಶೋಕ, ಆರೋಗ್ಯ ಸಚಿವ ಡಾ. ಸುಧಾಕರ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮತ್ತು ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಹ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪೂರ್ಣಾವಧಿಯವರೆಗೆ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೆ ಕಾಂಗ್ರೆಸ್ನ ಕಾಲೆಳೆದಿದ್ದಾರೆ. ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ನಲ್ಲಿ ಆಂತರಿಕ ಜಗಳ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ.
ಓದಿ: ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಸಚಿವ ಆರ್.ಅಶೋಕ್