ಬೆಂಗಳೂರು: ಇಂದು ಮಂಗಳೂರು ಪ್ರವಾಸವನ್ನು ಕೈಗೊಂಡಿದ್ದ ಸಿಎಂ ದಿಢೀರ್ ಮುಂದೂಡಿದ್ದಾರೆ. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಜೊತೆಗಿನ ಪ್ರಧಾನಿ ನರೇಂದ್ರ ಮೋದಿ ನಡೆಸುವ ಸಭೆಯಲ್ಲಿ ಗೃಹ ಕಚೇರಿ ಕೃಷ್ಣಾದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ.
ಮಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಭೆಯಲ್ಲಿ ಭಾಗಿಯಾಗಬೇಕಿದ್ದ ಸಿಎಂ ಬೊಮ್ಮಾಯಿ ಕೊನೆ ಕ್ಷಣದಲ್ಲಿ ಜಿಲ್ಲಾ ಪ್ರವಾಸ ಮುಂದೂಡಿಕೆ ಮಾಡಿದ್ದಾರೆ. ಮಂಗಳೂರಿಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಸಿಎಂ, ವಿಮಾನ ವಿಳಂಬವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಅವರು ವಿಮಾನ ನಿಲ್ದಾಣದಿಂದ ಆರ್.ಟಿ ನಗರ ನಿವಾಸಕ್ಕೆ ವಾಪಸ್ ಆದರು. ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ನಡೆಸಲಿರುವ ಸಭೆಯಲ್ಲಿ ಗೃಹ ಕಚೇರಿಯಿಂದ ಪಾಲ್ಗೊಳ್ಳಲು ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿಟಿ ದರ, ಔಷಧ ದಾಸ್ತಾನು, ಆಸ್ಪತ್ರೆ ವ್ಯವಸ್ಥೆ, ಲಸಿಕಾಕರಣದ ಪ್ರಮಾಣ ಸೇರಿದಂತೆ ಎಲ್ಲ ವಿವರಗಳೊಂದಿಗೆ ಸಿಎಂ ಬೊಮ್ಮಾಯಿ ಪಿಎಂ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಕ್ರೀಯ ಕೇಸ್ಗಳಲ್ಲಿ ಟಾಪ್ ಐದು ರಾಜ್ಯಗಳಲ್ಲಿ ಕರ್ನಾಟಕವೂ ಇರುವುದರಿಂದಾಗಿ ಇಂದಿನ ಸಭೆ ಮಹತ್ವದ್ದಾಗಿದೆ. ರಾಜ್ಯದಲ್ಲಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತ ಸಲಹೆ ಕೇಂದ್ರದಿಂದ ಬರುವ ನಿರೀಕ್ಷೆ ಇದೆ.
ಸದ್ಯ ರಾಜ್ಯದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಿದ್ದು, ಮತ್ತೆ ಏನೆಲ್ಲಾ ನಿಯಮ ಅಳವಡಿಸಬೇಕು ಎನ್ನುವ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ. ಸದ್ಯದ ಮಟ್ಟಿಗೆ ಟಫ್ ರೂಲ್ಸ್ ಜಾರಿ ಮಾಡುವುದಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ ಎನ್ನಲಾಗಿದೆ.
ಮಂಗಳೂರು ವಿಡಿಯೋ ಕಾನ್ಫರೆನ್ಸ್ ರದ್ದು: ಕೊರೊನಾ ನಿರ್ವಹಣೆ ಹಿನ್ನೆಲೆ ಮಂಗಳೂರಿನಲ್ಲಿ ಇಂದು 12 ಗಂಟೆಗೆ ಆಯೋಜಿಸಲಾಗಿದ್ದ ಪ್ರಧಾನಮಂತ್ರಿಗಳ ಜೊತೆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವಿಡಿಯೋ ಸಂವಾದ ರದ್ದುಪಡಿಸಲಾಗಿದೆ.
ಈ ವಿಡಿಯೋ ಸಂವಾದವು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಶಿಫ್ಟ್ ಆಗಿದೆ. ಕೊರೊನಾ ನಿರ್ವಹಣೆ ಹಿನ್ನೆಲೆ ಪ್ರಧಾನಮಂತ್ರಿಗಳು ನಡೆಸಲಿರುವ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಸಂವಾದದಲ್ಲಿ ಭಾಗಿಯಾಗಲು ಮಂಗಳೂರಿನ ದ.ಕ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಿದ್ದತೆ ನಡೆಸಲಾಗಿತ್ತು. ಆದರೆ ಸಿಎಂ ಬೊಮ್ಮಾಯಿ ಅವರ ಮಂಗಳೂರು ಪ್ರವಾಸ ಮುಂದೂಡಿದ್ದರಿಂದ ಇಲ್ಲಿ ನಡೆಯಬೇಕಾಗಿದ್ದ ವಿಡಿಯೋ ಸಂವಾದವು ಬೆಂಗಳೂರಿಗೆ ಶಿಫ್ಟ್ ಆಗಿದೆ.