ಬೆಂಗಳೂರು: ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳಿದ್ದಾರೆ. ಮೂರು ದಿನಗಳ ಈ ದೆಹಲಿ ಪ್ರವಾಸದಲ್ಲಿ ಹೈಕಮಾಂಡ್ ನಾಯಕರ ಭೇಟಿಯೂ ಸೇರಿರುವುದರಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಮತ್ತೊಮ್ಮೆ ಕುತೂಹಲ ಗರಿಗೆದರಿದೆ.
ಹೆಚ್ಎಎಲ್ ಮೂಲಕ ವಿಶೇಷ ವಿಮಾನದಲ್ಲಿ ಸಿಎಂ ದೆಹಲಿಗೆ ಪ್ರಯಾಣಿಸಿದ್ದಾರೆ. ಇಂದು ಮಧ್ಯಾಹ್ನದಿಂದ ರಾತ್ರಿಯವರೆಗೂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಸಭೆ ನಿಗದಿಯಾಗಿದ್ದು, ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಬಳಿಕ ಕರ್ನಾಟಕ ಭವನದಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಬೆಳಗ್ಗೆ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗುವರು. ಸಂಜೆ ಕೇಂದ್ರದ ವಿವಿಧ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಮಂಗಳವಾರ ಬೆಂಗಳೂರಿಗೆ ವಾಪಸ್ಸಾಗಲಿರುವ ಸಿಎಂ ಸಮಯಾವಕಾಶವನ್ನು ಮುಕ್ತವಾಗಿರಿಸಿಕೊಂಡಿದ್ದು, ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ನಡೆಸಲಿದ್ದಾರೆ. ವರಿಷ್ಠರ ಭೇಟಿ ಸಾಧ್ಯತೆ ನೋಡಿಕೊಂಡು ನಂತರ ಅವರು ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ. ಈ ಬಾರಿ ಮೂರು ದಿನಗಳ ಕಾಲ ಸಿಎಂ ದೆಹಲಿಯಲ್ಲಿ ಬೀಡುಬಿಡಲಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರೊಡೆದಿದೆ. ಹಾಗಾಗಿ, ಎಲ್ಲರೂ ಸಿಎಂ ದೆಹಲಿ ಪ್ರವಾಸದತ್ತ ಚಿತ್ತ ಹರಿಸಿದ್ದಾರೆ.
ಇದನ್ನೂ ಓದಿ: ವರ್ಷದ ಸಂಭ್ರಮದಲ್ಲಿರುವ ಬೊಮ್ಮಾಯಿ ಸರ್ಕಾರಕ್ಕೆ ಬಿಟ್ಟು ಬಿಡದೆ ಕಾಡಿದ 'ವಿವಾದಾತ್ಮಕ ಹೇಳಿಕೆ'ಗಳ ತಲೆವರಿ