ಬೆಂಗಳೂರು : ಸರ್ಕಾರಿ ಯೋಜನೆಗಳು ಗ್ರಾಮಗಳಿಂದ ಪ್ರಾರಂಭವಾಗಿ ತಾಲೂಕು, ಜಿಲ್ಲೆಯಿಂದ ರಾಜ್ಯಕ್ಕೆ ಬರಬೇಕು. ಹಣಕಾಸು ರಾಜ್ಯದಿಂದ ಪ್ರಾರಂಭಗೊಂಡು ಗ್ರಾಮಗಳಿಗೆ ತಲುಪಬೇಕು.
ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಇಂತಹ ನರೇಗಾ ಹಬ್ಬಗಳು ಒಂದು ಜಿಲ್ಲೆಯಲ್ಲಿ ಮಾತ್ರವಲ್ಲ ಪ್ರತಿ ಜಿಲ್ಲೆಯಲ್ಲೂ ಆಚರಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆಯೋಜಿಸಿದ್ದ ನರೇಗಾ ಹಬ್ಬ- 2022ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ನಂತರ ರಾಜ್ಯದಲ್ಲಿ ಯೋಜನೆ ಅನುಷ್ಠಾನ, ಅತ್ಯುತ್ತಮ ಸಾಧನೆ ಮಾಡಲು ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೇಸಿಗೆ ಕಾಲದಲ್ಲಿ ಯೋಜನೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ದುಡಿಯೋಣ ಬಾ ಅಭಿಯಾನಕ್ಕೂ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಅಧಿಕಾರ ವಿಕೇಂದ್ರೀಕರಣ ಮಾನವ ಅಭಿವೃದ್ಧಿಗೆ ನಡೆಯಬೇಕಿರುವ ಸಹಜ ಪ್ರಕ್ರಿಯೆ. ಅಧಿಕಾರ ವಿಕೇಂದ್ರೀಕರಣ ಮಾಡದೆ ಇದ್ದರೆ ಆಡಳಿತ ವ್ಯವಸ್ಥೆಯೇ ಹೆಪ್ಪುಗಟ್ಟುತ್ತದೆ. ಅಧಿಕಾರ ವಿಕೇಂದ್ರೀಕರಣದಿಂದ ರಾಜ್ಯದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದೇವೆ.
ಅಧಿಕಾರ ಮನುಷ್ಯನನ್ನು ಉತ್ತಮ ಸೇವಕನಾಗಿ ಹಾಗೂ ಅತ್ಯಂತ ಕೆಟ್ಟ ಮಾಲೀಕನಾಗಿ ಮಾಡಬಹುದು. ಆದರೆ, ಆಯ್ಕೆ ನಮ್ಮದಾಗಿರುತ್ತದೆ. ರಾಜಕಾರಣದಲ್ಲಿ ಎರಡು ಬಗೆ, ಒಂದು ಅಧಿಕಾರದ ರಾಜಕಾರಣ, ಮತ್ತೊಂದು ಜನತೆಯ ರಾಜಕಾರಣ. ಜನರ ಸುತ್ತಲೂ ಅಭಿವೃದ್ಧಿ ಆಗಬೇಕೇ ಹೊರತು, ಅಭಿವೃದ್ಧಿ ಸುತ್ತ ಜನರು ಓಡಾಡಬಾರದು ಎಂದು ಪ್ರತಿಪಾದಿಸಿದರು.
ಅಧಿಕಾರದ ವಿಕೇಂದ್ರೀಕರಣ ಮಹಾತ್ಮ ಗಾಂಧೀಜಿಯವರಿಂದ ಶುರುವಾಗಿದೆ. ಗ್ರಾಮದಲ್ಲಿ ಒಳ್ಳೆ ಆಡಳಿತ ಮಾಡಲು ಗ್ರಾಮ ಸ್ವರಾಜ್ಯವನ್ನು ಅಟಲ್ ಬಿಹಾರಿ ವಾಜಪೇಯಿ ಮಾಡಿದರು. ಹೀಗಾಗಿ, ಇವೆರಡನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಮ್ಮದೇ ಆದ ಪಂಚಾಯತ್ ಕಾನೂನು ಮಾಡಿದ್ದೇವೆ. ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪಂಚಾಯತ್‌ನಿಂದಾಗಿಯೇ ನಿಜವಾದ ಆರ್ಥಿಕತೆ ಬೆಳವಣಿಗೆ ಆಗುತ್ತಿರುವುದು. ಬೆವರು ಸುರಿಸಿ ದುಡಿಯುತ್ತಿರುವ ಗ್ರಾಮೀಣ ಜನರಿಂದಲೇ ದೇಶದ ಆರ್ಥಿಕತೆ ಬೆಳೆಯುತ್ತಿದೆ ಎಂದರು.
ಈ ಬಾರಿಯ ನನ್ನ ಬಜೆಟ್ನಲ್ಲಿ ದುಡಿಯುವ ವರ್ಗಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದೇನೆ. ಮೊದಲೆಲ್ಲ ದುಡ್ಡೆ ದೊಡ್ಡಪ್ಪ ಅನ್ನುತ್ತಿದ್ದರು. ಈಗ ದುಡಿಮೆಯೇ ದೊಡ್ಡಪ್ಪ ಅನ್ನಬೇಕು. ದುಡಿಮೆಯ ಮೂಲಕ ಬದುಕು ಕೊಡುತ್ತಿರುವ ಯೋಜನೆ ನರೇಗಾ. 1 ಸಾವಿರ ಅಂಗನವಾಡಿ ಕಟ್ಟಲು 50 ಕೋಟಿ ಕೊಟ್ಟಿದ್ದೇನೆ. ನರೇಗಾ ಅಸ್ತ್ರ ಬರೀ ಕೆಲಸ ಕೊಡೋದು ಅಲ್ಲ, ಬಡತನ ನಿರ್ಮೂಲನೆ ಆಗಬೇಕು ಎನ್ನುವುದು. ಈ ನರೇಗಾ ಹಬ್ಬವನ್ನು ಪ್ರತಿ ಜಿಲ್ಲೆಯಲ್ಲೂ ಮಾಡಬೇಕು ಎಂದು ಸಿಎಂ ಸಲಹೆ ನೀಡಿದರು.
ಕೆರೆ ಕಟ್ಟೆ ಕಟ್ಟಲು ಈಶ್ವರಪ್ಪನವರಿಗೆ ಬಹಳ ಪ್ರೀತಿ ಎಂದು ಈಶ್ವರಪ್ಪ ಕಾರ್ಯವೈಖರಿ ಬಗ್ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ಮನೆ ಮನೆಗೆ ಗಂಗೆ ಯೋಜನೆ ಮೂಲಕ ಪ್ರತಿ ಮನೆಗೂ ನೀರು ಕೊಡುತ್ತಿದ್ದೇವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಹಳ ಅದ್ಭುತವಾದ ಕೆಲಸ ಆಗುತ್ತಿದೆ ಎಂದು ಇಲಾಖೆ ಬಗೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ದೇಶದಲ್ಲೇ ರಾಜ್ಯಕ್ಕೆ ನರೇಗಾ ಯೋಜನೆ ಮೂಲಕ ಒಳ್ಳೆ ಹೆಸರು ಬಂದಿದೆ. ನಮಗೆ 13 ಕೋಟಿ ಮಾನವ ದಿನವನ್ನು ಕೇಂದ್ರ ಸರ್ಕಾರ ಗುರಿಯಾಗಿ ಕೊಟ್ಟಿತ್ತು ಆದರೆ ನಾವು 16 ಕೋಟಿ ಸಾವಿರ ಮಾನವ ದಿನ ಮುಟ್ಟಿ ಟಾರ್ಗೆಟ್ ರೀಚ್ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಜಲಶಕ್ತಿ ಅಭಿಯಾನದಡಿ 8.92 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 4.87 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಈ ಅಭಿಯಾನ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು.