ನವದೆಹಲಿ/ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಹಣಕಾಸು ಅನುಮೋದನೆ ಪಡೆಯುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಕುಳಿತ ಸಿಎಂ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ವೀಕ್ಷಿಸಿದರು.
ನಿರ್ಮಲಾ ಸೀತಾರಾಮನ್ ಭೇಟಿ: ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಕರ್ನಾಟಕ ಭವನದಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯ ಹಣಕಾಸಿಗೆ ಅನುಮೋದನೆ ಆಗಬೇಕಿತ್ತು. ಆ ಬಗ್ಗೆ ಮಾತುಕತೆ ನಡೆಸಿದ್ದೇನೆ. ಜೊತೆಗೆ ಇನ್ನೂ ಮೂರು ಯೋಜನೆಗಳ ಹಣಕಾಸಿಗೆ ಅನುಮೋದನೆ ಪಡೆಯಬೇಕಿತ್ತು. ಆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಅದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ಪ್ರಾತಿನಿಧ್ಯ: ಜಿಎಸ್ಟಿ ಜಿಒಎಂ ಸಭೆ ಬಗ್ಗೆಯೂ ಚರ್ಚೆಯಾಗಿದೆ. ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವುದಾಗಿ ಹಣಕಾಸು ಸಚಿವರು ಹೇಳಿದ್ದಾರೆ. 75 ಕೆರೆಕಟ್ಟೆಗಳ ಅಭಿವೃದ್ಧಿ ಮಾಡಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಜೆ.ಪಿ ನಡ್ಡಾರನ್ನು ಭೇಟಿಯಾಗಲಿರುವ ಸಿಎಂ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮಯ ಕೇಳಿದ್ದೇನೆ. ಇಂದು ಸಂಜೆ ಅಥವಾ ರಾತ್ರಿ ಸಮಯ ಸಮಯ ಕೊಡುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ಭೇಟಿಯಾದರೂ, ಬೇರೆ ನಾಯಕರೆಲ್ಲ ಇದ್ದ ಕಾರಣ ಯಾವುದೇ ಮಾತುಕತೆ ನಡೆಸಿಲ್ಲ. ಸಂಜೆ ಮಾತುಕತೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ದೆಹಲಿ ಯಾತ್ರೆ; ಇಂದು ನಡ್ಡಾ, ಅಮಿತಾ ಶಾ ಭೇಟಿ, ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಸಾಧ್ಯತೆ!
ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಕಾರ: ಯುವಕ ಚಂದ್ರು ಕೊಲೆ ಪ್ರಕರಣ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದರು. ಏನು ಹೇಳಿಕೆ ನೀಡಿದ್ದಾರೆ, ಏನಾಗಿದೆ ಎಂದು ಪರಿಶೀಲಿಸಿ ಬಳಿಕ ಪ್ರತಿಕ್ರಿಯಿಸುವುದಾಗಿ ಹೇಳಿದರು.