ಬೆಂಗಳೂರು : ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಪ್ರಸನ್ನಾನಂದಪುರಿ ಸ್ವಾಮೀಜಿಯೊಂದಿಗೆ ಮಾತನಾಡಿದ್ದೇನೆ, ಪರಮಪೂಜ್ಯರು ಸಮಾಜದ ಏಳಿಗೆಗಾಗಿ ಸಾಕಷ್ಟು ಆಹೋರಾತ್ರಿ ಹೋರಾಟ ಮಾಡಿದ್ದಾರೆ.
ಎಸ್‌ಟಿ ಸಮುದಾಯದ ಪ್ರಮುಖ ಬೇಡಿಕೆಯ ಬಗ್ಗೆ ಈಗಾಗಲೇ ನಾಗಮೋಹನ್ ದಾಸ್ ವರದಿ ಕೊಟ್ಟಿದ್ದಾರೆ. ಶೇ.50ರಷ್ಟು ಹೆಚ್ಚು ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದೆ. ಇರುವ ಕಾನೂನಿನಲ್ಲಿ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಏನೆಲ್ಲಾ ಕೊಡಲು ಸಾಧ್ಯವೋ ಅದನ್ನೆಲ್ಲಾ ನೀಡುತ್ತೇವೆ ಎಂದರು.
ನಾಗಮೋಹನ್ ದಾಸ್ ವರದಿ ಬಗ್ಗೆ ಚರ್ಚೆ ನಡೆಸುತ್ತೇವೆ, ಗುರುಗಳ ಆಶೀರ್ವಾದದಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಭಗವಂತ ಅವರಿಗೆ ಹೆಚ್ಚಿನ ಆರೋಗ್ಯ ಹಾಗೂ ಶಕ್ತಿಯನ್ನ ನೀಡಲಿ. ನಾನು ಈಗ ಯಾವುದೇ ಆಶ್ವಾಸನೆ ಕೊಡುವುದಿಲ್ಲ, ವರದಿಯ ಕುರಿತು ಪರಿಶೀಲನೆ ನಡೆಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಮೊದಲು ಆರ್ಯರಾ, ದ್ರಾವಿಡರಾ ಅನ್ನೋದನ್ನು ಹೇಳಲಿ: ಸಿಎಂ ಬೊಮ್ಮಾಯಿ ತಿರುಗೇಟು