ಬೆಂಗಳೂರು: ರಸ್ತೆಗಳ ವಿಚಾರದಲ್ಲಿ ಜನರಿಂದ ನಾವು ಸಾಕಷ್ಟು ಟೀಕೆ ಎದುರಿಸುತ್ತಿದ್ದು, ಬೆಂಗಳೂರಿನ ಪ್ರತಿ ವಾರ್ಡ್ನ ಮುಖ್ಯ ರಸ್ತೆಗಳ ಕುರಿತು ರೋಡ್ ಆಡಿಟ್ ಮಾಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಬೆಂಗಳೂರು ನಗರದ ರಸ್ತೆಗಳ ಗುಂಡಿ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಕಾಲ ಕಾಲಕ್ಕೆ ಮಾರ್ಪಾಡು ಮಾಡುವ ಕಾರಣದಿಂದ ರಸ್ತೆ ನಿರ್ಮಾಣ ವಿಳಂಬವಾಗಲಿದೆ.
ಎಲ್ಲ ಸ್ಮಾರ್ಟ್ ಸಿಟಿಯಲ್ಲಿಯೂ ತಜ್ಞರ ಅಭಿಪ್ರಾಯ ಪಡೆದು ಕಾಮಗಾರಿ ಮಾಡಬೇಕಾಗಿದೆ, ಒಬ್ಬೊಬ್ಬ ತಜ್ಞ ಬಂದು ಒಂದೊಂದು ಸಲಹೆ ನೀಡುತ್ತಾರೆ. ಅದೆಲ್ಲ ಪರಿಗಣಿಸಿ ಮಾಡಬೇಕಿದೆ. ಬೆಂಗಳೂರು ರಸ್ತೆಗಳ ಬಗ್ಗೆ ಸಮಿತಿ ರಚಿಸಿದ್ದೇವೆ, ಇಂಡಿಯನ್ ರೋಡ್ ಕಾಂಗ್ರೆಸ್ ಅನ್ವಯ ರಸ್ತೆಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದಕ್ಕೆ ಸದಸ್ಯರು ತೃಪ್ತರಾಗದೇ ಇದ್ದಾಗ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಾರ್ವಜನಿಕರ ಮನಸ್ಸಿನಲ್ಲಿ ಕಾಡುತ್ತಿರುವ ಪ್ರಶ್ನೆಯೂ ರಸ್ತೆ ಗುಂಡಿಯದ್ದಾಗಿದೆ. ವಿಳಂಬ ಮತ್ತು ಗುಣಮಟ್ಟದ ಬಗ್ಗೆ ಸದಸ್ಯರು ಪ್ರಶ್ನಿಸಿದ್ದಾರೆ. ಪಾಟ್ ಹೋಲ್, ಥರ್ಮಲ್ ಕ್ರ್ಯಾಕಿಂಗ್, ಸ್ಟ್ರಿಪ್ಪಿಂಗ್ ಇಲ್ಲದ ರಸ್ತೆ ದೇಶದಲ್ಲೇ ಎಲ್ಲೂ ಸಿಗಲ್ಲ, ಒಂದಲ್ಲ ಒಂದು ಸಮಸ್ಯೆ ಇರಲಿದೆ. ಬೆಂಗಳೂರಿನ ರಸ್ತೆ ಬಗ್ಗೆ ಸಾಕಷ್ಟು ಟೀಕೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.
ಮುಖ್ಯ ರಸ್ತೆಗಳ ಬಗ್ಗೆ ರಸ್ತೆ ನಿರ್ವಹಣೆಯ ಆಡಿಟ್ ಮಾಡಲು ನಿರ್ಧರಿಸಿದ್ದು, ರಸ್ತೆ ನಿರ್ಮಾಣ, ರಸ್ತೆ ನಿರ್ಮಿಸಿ ಎಷ್ಟು ವರ್ಷ ಆಗಿದೆ, ನಿರ್ವಹಣೆ ಆಗಿದೆಯಾ, ದುರಸ್ತಿ, ಪಾಟ್ ಹೋಲ್, ಯಾವ ಏಜೆನ್ಸಿ ರಸ್ತೆ ಕೆಲಸ ಮಾಡಿದೆ, ಲೋಪವಾಗಿದ್ದರೆ ಯಾರು ಹೊಣೆ ಎನ್ನುವ ಕುರಿತು ಆಡಿಟ್ ಮಾಡಲಾಗುತ್ತದೆ. ಮಾಗಡಿ ರಸ್ತೆ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಕ್ರೀಡಾಂಗಣ ನಿರ್ವಹಣೆ ಮಾಡದಿದ್ದಲ್ಲಿ ವಾಪಸ್:
ಬೆಂಗಳೂರಿನ ಹನುಮಂತ ನಗರದಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಕಲ್ಪಿಸಿ ಕ್ರೀಡಾಂಗಣ ನಿರ್ವಹಣೆ ಮಾಡಲು ಬಿಬಿಎಂಪಿಗೆ ಸಾಧ್ಯವಾಗದೇ ಹೋದಲ್ಲಿ ಕ್ರೀಡಾಂಗಣವನ್ನು ಸರ್ಕಾರ ವಾಪಸ್ ಪಡೆದು ಬೇರೆ ಪ್ರಾಧಿಕಾರಕ್ಕೆ ವಹಿಸಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್, ಕ್ರೀಡಾಂಗಣ ನಿರ್ವಹಣೆ ಮಾಡಲು ಬಿಬಿಎಂಪಿ ವಿಫಲವಾಗಿದ್ದು, ಬೇರೆ ಪ್ರಾಧಿಕಾರಕ್ಕೆ ವಹಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಬಿಎಂಪಿಗೆ ಕೊಟ್ಟಿರುವುದನ್ನ ಬೇರೆ ಪ್ರಾಧಿಕಾರಗಳಿಗೆ ಕೊಡುತ್ತಾ ಹೋಗುವುದಕ್ಕೆ ಸಾಧ್ಯವಿಲ್ಲ. ಆದರೆ, ಕ್ರೀಡಾಂಗಣದ ನಿರ್ವಹಣೆ ಕುರಿತು ಪಾಲಿಕೆ ಕ್ರಮ ಕೈಗೊಂಡಿದೆ.
ಅನುದಾನ ಬಳಕೆ ಮಾಡಿಕೊಂಡು ಮೂಲಸೌಕರ್ಯ ಕಲ್ಪಿಸಲು ಟೆಂಡರ್ ಕರೆದು ಕೆಲಸ ಶುರು ಮಾಡಿದೆ. ಈ ಮಾಹಿತಿ ತಪ್ಪಾಗಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಚಿವರ ಉತ್ತರಕ್ಕೆ ಅಸಮಾಧಾನಗೊಂಡ ಸದಸ್ಯ ವೆಂಕಟೇಶ್, ನಾನು ಮಾಡಿದ ಎಲ್ಲ ಆರೋಪ ಸತ್ಯ. ನಾನೇಳಿದ್ದು ಸುಳ್ಳೆಂದು ಸಾಬೀತಾದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಹೇಳುತ್ತಿಲ್ಲ, ನಮಗೆ ತಪ್ಪು ಮಾಹಿತಿ ನೀಡಿದ್ದರೆ ಕ್ರಮ ಎಂದಿದ್ದೇನೆ. ಆದರೂ ಪಾಲಿಕೆಯಿಂದ ಕ್ರೀಡಾಂಗಣ ವಾಪಸ್ ಪಡೆಯುವ ಕುರಿತು ಸಿಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ಪಾಲಿಕೆ ಜೊತೆಗೂ ಚರ್ಚೆ ನಡೆಸಲಾಗುತ್ತದೆ, ಪಾಲಿಕೆಗೆ ನಿರ್ವಹಣೆ ಮಾಡಲು ಆಗದೇ ಇದ್ದಲ್ಲಿ ಸರ್ಕಾರ ಬೇರೆ ನಿರ್ಧಾರ ಕೈಗೊಳ್ಳಿದೆ ಎಂದು ಭರವಸೆ ನೀಡಿದರು.
ಆರೋಪಿಗಳ ಹೆಡೆಮುರಿ ಕಟ್ಟುತ್ತೇವೆ:
112 ಸಂಖ್ಯೆಯ ಹೊಯ್ಸಳ ವಾಹನ ಪ್ರತಿ ಠಾಣೆಯಲ್ಲಿಯೂ ಇರಲಿದೆ. ಕರೆ ಬಂದ ಅರ್ಧ ಗಂಟೆಯಲ್ಲಿ ಸ್ಥಳ ತಲುಪಲಿದೆ. ಬೆಂಗಳೂರಿನಲ್ಲಿ ಹತ್ತು ನಿಮಿಷದೊಳಗೆ ಸ್ಥಳ ತಲುಪಲಿದೆ, ಅಗತ್ಯ ಸಿಬ್ಬಂದಿಯೂ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪ್ರಶ್ನೋತ್ತ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಾನೆ ಶ್ರೀನಿವಾಸ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ರಾಜ್ಯದ ಎಲ್ಲ ಠಾಣೆಯಲ್ಲೂ ನಮ್ಮ ಗಸ್ತು ವಾಹನ ಇವೆ, ಇದರಲ್ಲಿ ಯಾವುದೇ ಕೊರತೆ ಇಲ್ಲ. ಕರೆ ಬಂದ ಕೂಡಲೇ ವಾಹನ ಸ್ಥಳಕ್ಕೆ ತೆರಳಲಿದೆ.
ಮೈಸೂರು ಇತರ ಪ್ರಕರಣದಲ್ಲಿ ಬೆನ್ನಹತ್ತಿ ಆರೋಪಿಗಳ ಹೆಡೆಮುರಿ ಕಟ್ಟಿ ತರಲಿದ್ದೇವೆ. ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. 60 ದಿನ ಒಳಗೆ ಆರೋಪಪಟ್ಟಿ ಸಲ್ಲಿಕೆ, ತ್ವರಿತ ನ್ಯಾಯಾಲಯಕ್ಕೆ ಪ್ರಕರಣ, ಸಾಕ್ಷಿ ಹೇಳಿಕೆ ಬೇಗ ದಾಖಲಿಸಿಕೊಳ್ಳಬೇಕು ಎನ್ನುವುದು ಸೇರಿ ಆಸಕ್ತಿಯಿಂದ ಇಲಾಖೆ ಕೆಲಸ ಮಾಡುತ್ತಿದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ಮಹಿಳಾ ಠಾಣೆ, ಪ್ರತಿ ಠಾಣೆಯಲ್ಲೂ ಮಹಿಳಾ ಪೊಲೀಸ್ ಇರಲಿದ್ದಾರೆ. ಹೆಚ್ಚು ಜನರಿರುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಇರಲಿದೆ, ಕಾಲೇಜು ಕ್ಯಾಂಪಸ್ ಇತ್ಯಾದಿಯಲ್ಕಿ ಕಣ್ಗಾವಲು ಇರಿಸಲಾಗಿದೆ ಕ್ರೈಂ ತಡೆಗೆ ಸರ್ಕಾರ ಎಲ್ಲ ರೀತಿಯ ಕ್ರಮ ವಹಿಸಿದೆ ಎಂದರು.