ಬೆಂಗಳೂರು : ನಗರದಲ್ಲಿ ಸುರಿದ ಭಾರಿ ಮಳೆಯ ನಡುವೆಯೂ ಸಿಎಂ ಬಸವರಾಜ್ ಬೊಮ್ಮಾಯಿ ತೋಟಗಾರಿಕಾ ಸಚಿವ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವ ಮುನಿರತ್ನ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿಯೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದರು ಎಂದು ಹಾಡಿ ಹೊಗಳಿ ಪರೋಕ್ಷವಾಗಿ ಕಾರ್ಯಕ್ರಮದಲ್ಲಿ ಕೇಳಿ ಬಂದ ಕಾಂಗ್ರೆಸ್ ಪರ ಕೂಗಿಗೆ ಮತ್ತು ಆರೋಪಗಳಿಗೆ ಉತ್ತರ ನೀಡಿದ್ರು.
ಸಂಜೆಯ ಭಾರಿ ಮಳೆಯಲ್ಲಿ ಮೊದಲ ಕಾರ್ಯಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಯಶವಂತಪುರದಲ್ಲಿ ನೂತನವಾಗಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್ ಹಾಗೂ 300 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ಉದ್ಘಾಟನೆ ಮಾಡಿದರು. ಬಿ.ಕೆ. ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಸತಿ ನಿರ್ಮಾಣ ಕಾಮಗಾರಿಯ ಮೊದಲನೇ ಹಂತದ ಉದ್ಘಾಟನೆ ಹಾಗೂ 2ನೇ ಹಂತದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿದರು.
ಎರಡನೆಯ ಕಾರ್ಯಕ್ರಮ: ಜಾಲಹಳ್ಳಿಯ ಪ್ರಸ್ತಾವಿತ ಶಾಲಾ ಕಟ್ಟಡದ ಶಂಕುಸ್ಥಾಪನೆ, ಆರು ಅಂಕಣದ ಮಹಿಳಾ ಮತ್ತು ಪುರುಷರ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆ, ಜೆ.ಪಿ ಪಾರ್ಕ್‌ನ ಕೆರೆ ಅಭಿವೃದ್ಧಿ ಕಾಮಗಾರಿ ಮತ್ತು ಆಟದ ಮೈದಾನದಲ್ಲಿ ಗ್ಯಾಲರಿ ಮತ್ತು ಸಂಗೀತ ಕಾರಂಜಿ ಕಾಮಗಾರಿಯ ಶಂಕುಸ್ಥಾಪನೆ ಮಾಡಿದರು.
ಮೂರನೆಯ ಕಾರ್ಯಕ್ರಮ: ಜೆ.ಪಿ ಪಾರ್ಕ್ ನಲ್ಲಿ ಕೋವಿಡ್-19 ಆರ್.ಟಿ.ಪಿ.ಸಿ.ಆರ್ ಲ್ಯಾಬ್‌ನ ಕಟ್ಟಡ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆನ್ನು ಕೂಡ ನೆರವೇರಿಸಿದರು.
ಈ ವೇಳೆ ಸಚಿವ ಹಾಗೂ ಸ್ಥಳೀಯ ಶಾಸಕ, ಸಚಿವ ಮುನಿರತ್ನ, ಕಂದಾಯ ಸಚಿವರಾದ ಆರ್. ಅಶೋಕ್, ಮಾನ್ಯ ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು, ಮಾನ್ಯ ಸಂಸದರಾದ ಡಿ.ಕೆ.ಸುರೇಶ್, ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಇನ್ನಿತರೆ ಅಧಿಕಾರಿಗಳು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.