ಬೆಂಗಳೂರು: ಮಹಿಳೆಯರ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಎಲ್ಲಾ ಠಾಣೆಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ತಮಗೆ ಅನ್ಯಾಯವಾಗಿದೆ ಎಂದು ದೂರು ನೀಡಲು ಬಂದಾಗ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ದೂರು ದಾಖಲಿಸದೇ ಇದ್ದರೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದೂರುದಾರರು ಬಂದಾಗ ಮೊದಲು ಪ್ರಕರಣ ದಾಖಲಿಸಬೇಕು, ಆನಂತರ ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ಮಾಡಬೇಕು. ಅದನ್ನ ಬಿಟ್ಟು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ರೆ ಅಮಾನತು ಗ್ಯಾರಂಟಿ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಇನ್ನು ಮಹಿಳೆಯರ ಹಿತದೃಷ್ಟಿಯಿಂದ ಈಗಾಗಲೇ ಕೆಲ ಕ್ರಮ ಕೈಗೊಂಡಿದ್ದು, ಒಂದು ವೇಳೆ ಠಾಣೆಯಲ್ಲಿ ಹೊಯ್ಸಳ ವಾಹನ ಕೆಟ್ಟು ನಿಂತ್ರೆ, ಇನ್ಸ್ಪೆಕ್ಟರ್ ಜೀಪ್ಗಳಲ್ಲಿಯೇ ಸ್ಥಳಕ್ಕೆ ಹೋಗಬೇಕು. ಹೊಯ್ಸಳ ವಾಹನ ರಿಪೇರಿ ಮಾಡಿಸುವವರೆಗೂ ಇನ್ಸ್ಪೆಕ್ಟರ್ ಜೀಪ್ ಬಳಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ.