ಬೆಂಗಳೂರು: ಸಾಲ ತೀರಿಸಲಾಗದೆ ತತ್ತರಿಸುತ್ತಿದ್ದ ಯುವಕನೊಬ್ಬ ತನ್ನ ಗೆಳತಿ ಜೊತೆ ಸೇರಿ ಸರಗಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ. ಆದ್ರೆ ಈ ಜೋಡಿಯನ್ನು ಸೆರೆ ಹಿಡಿಯುವಲ್ಲಿ ನಂದಿನಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮೇ 28 ರಂದು ನಂದಿನಿ ಲೇಔಟ್ ಪಾರ್ಕ್ ಬಳಿ ಸ್ಕೂಟರ್ನಲ್ಲಿ ಬಂದಿದ್ದ ಯುವಕ ಹಾಗೂ ಆತನ ಗೆಳತಿ ವಾಕಿಂಗ್ ಮಾಡುತ್ತಿದ್ದ ಗಾಯತ್ರಿಯನ್ನು ಹಿಂಬಾಲಿಸಿದ್ದರು. ಬಳಿಕ ಆಕೆಗೆ ಖಾರದಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿಯಲು ಯುವತಿ ಪ್ರಯತ್ನಿಸಿದ್ದಾಳೆ. ಆ ವೇಳೆ ಮಹಿಳೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.
ಜನ ಸೇರುತ್ತಿದ್ದಂತೆ ಅಲರ್ಟ್ ಆದ ಯುವತಿ ಸ್ನೇಹಿತನ ಸ್ಕೂಟರ್ನಲ್ಲಿ ಎಸ್ಕೇಪ್ ಆಗಿದ್ದಾಳೆ. ಈ ಬಗ್ಗೆ ಮಹಿಳೆ ನಂದನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಯನ್ನು ಪರಿಶೀಲನೆ ನಡೆಸಿ ಬೈಕ್ ನಂಬರ್ನ್ನು ಪತ್ತೆ ಹಚ್ಚಿದ್ದರು. ಬೈಕ್ ನಂಬರ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಹಾಗೂ ಯುವತಿ ಟ್ರೇಡಿಂಗ್ ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿದ್ದರು. ಇದರಲ್ಲಿ ಹಣ ಕಳೆದುಕೊಂಡಿದ್ದರಿಂದ ಆನ್ಲೈನ್ ಮೂಲಕ 15 ಸಾವಿರ ರೂಪಾಯಿಯನ್ನು ಯುವಕ ಸಾಲವಾಗಿ ಪಡೆದುಕೊಂಡಿದ್ದ. ಪಡೆದಿದ್ದ ಹಣವನ್ನ ಇಬ್ಬರು ಖರ್ಚು ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲೋನ್ ತೀರಿಸಲು ಬ್ಯಾಂಕ್ನಿಂದ ಒತ್ತಡ ಹೇರಲಾಗಿತ್ತು. ಇದರಿಂದ ಕಂಗೆಟ್ಟ ಯುವಕನಿಗೆ ಗೆಳತಿ ಸಾಥ್ ನೀಡಿದ್ದಳು. ಹಣ ಹೊಂದಿಸಲು ಈ ಜೋಡಿ ಸರಗಳ್ಳತನ ಮಾಡಲು ಮುಂದಾದರು. ಅದರಂತೆ ಮೇ 28ರಂದು ಮಹಿಳೆಯೊಬ್ಬಳ ಮೇಲೆ ಖಾರದ ಪುಡಿ ಎರಚಿ ಸರಗಳ್ಳತನಕ್ಕೆ ಕೈ ಹಾಕಿದ್ದರು. ಆದ್ರೆ ಅದು ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.