ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಮತ್ತಷ್ಟು ಗ್ರಾಮಗಳ ಸೇರ್ಪಡೆ, ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ, ಕರ್ನಾಟಕ ಗೃಹ ಮಂಡಳಿಯ 98 ವಸತಿ ಯೋಜನೆಗಳನ್ನು ₹2,275 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮತಿ, ಸಾಫ್ಟವೇರ್ ಟೆಕ್ನಾಲರ್ಜಿ ಪಾರ್ಕ್ ಸಹಯೋಗದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಅನುಮತಿ ಸೇರಿದಂತೆ ಹಲವು ಮಹತ್ವದ ವಿಷಯಗಳಿಗೆ ಇಂದಿನ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಇಂದು ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಮಾಡಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ತಾತ್ಕಾಲಿಕ ಒಪ್ಪಿಗೆ ನೀಡಿತ್ತು.
ಇಂದಿನ ಸಂಪುಟ ಸಭೆಯಲ್ಲಿ ಹೊಸಪೇಟೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಡಗಲಿ, ಕೂಡ್ಲಿಗಿ, ಕೊಟ್ಟೂರು ಈ ಆರು ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಜಿಲ್ಲೆ ರಚನೆ ಮಾಡುವುದರ ಜೊತೆಗೆ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ನಕ್ಷೆ, ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಕಂದಾಯ ವಿಭಾಗಗಳು, ಉಪ ವಿಭಾಗಗಳನ್ನು ಹಾಗೂ ಜಿಲ್ಲೆ ರಚನೆಗೆ ಅಗತ್ಯ ಅನುದಾನ ಸೇರಿದಂತೆ ಉಳಿದಂತೆ ಕಾನೂನಾತ್ಮಕ ಹಾಗೂ ಇತರ ವಿಚಾರಗಳಿಗೆ ಸಂಪುಟ ಪೂರ್ಣ ಪ್ರಮಾಣದಲ್ಲಿ ಅನುಮೋದನೆ ನೀಡಿದೆ.
ಹಲವು ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ: ಬಿಬಿಎಂಪಿಗೆ ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಲಕ್ಷ್ಮಿಪುರ ಕಂದಾಯ ಗ್ರಾಮ, ಕಾನ್ಷರಾಂನಗರ, ಲಕ್ಷ್ಮಿಪುರದ ಎಲ್ಲ ಬಡಾವಣೆಗಳನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ನಂ.12ಕ್ಕೆ ಸೇರ್ಪಡೆಗೊಳಿಸುವುದು. ಅದೇ ರೀತಿ ಕಗ್ಗಲೀಪುರ ವ್ಯಾಪ್ತಿಯ ಮಲ್ಲಸಂದ್ರ ಹಾಗೂ ಉತ್ತರಹಳ್ಳಿ ಮನವರ್ತೆ ಕಾವಲ್ ಗ್ರಾಮದ ಭಾಗಶಃ ಪ್ರದೇಶಗಳನ್ನು ಬಿಬಿಎಂಪಿಗೆ ಸೇರಿಸಲು ಸಚಿವ ಸಂಪುಟ ಸಭೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.
ಜಿಂದಾಲ್ಗೆ ಭೂಮಿ ಕೊಡಲು ಪರಿಶೀಲನೆ: ಜಿಂದಾಲ್ ಕಂಪನಿಗೆ 2,000 ಎಕರೆ ಜಮೀನು ಕೊಡುವುದರ ಬಗ್ಗೆ ಮತ್ತೆ ಪರಿಶೀಲನೆ ಮಾಡುತ್ತೇವೆ. ಮೆಟ್ರೋ ರೈಲು ಅನುಷ್ಠಾನ ಸಮಿತಿಗೆ ಮೂವರು ಸದಸ್ಯರನ್ನು ನೇಮಕ ಮಾಡಲಾಗಿದ್ದು, ಪೊಲೀಸ್ ಅಯುಕ್ತರು, ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ಮತ್ತು ಕೆಆರ್ಐಡಿಎಲ್ ನಿರ್ದೇಶಕರನ್ನು ನೇಮಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದದ್ದ ಮಸ್ಕಿ ನಾಲಾ ಯೋಜನೆ ಬಲದಂಡೆ ಮತ್ತು ಎಡದಂತೆ ಮುಖ್ಯ ಕಾಲುವೆಗಳ ಹಾಗೂ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ₹52.54 ಕೋಟಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ನೈಸ್ ಯೋಜನೆ ಅಡಿ ಬರುವ ಜಮೀನುಗಳ ಬಗ್ಗೆ ಇರುವ ವ್ಯಾಜ್ಯಗಳ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯನ್ನು ಪುನರ್ ರಚಿಸುವುದು. ಕರ್ನಾಟಕ ಗೃಹ ಮಂಡಳಿಯು 2020-21ನೇ ಸಾಲಿನಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 98 ಸ್ಥಳಗಳಲ್ಲಿ ವಸತಿ ಯೋಜನೆಗಳನ್ನು ₹2,275 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮತಿ ನೀಡಲಾಗಿದೆ.
ಎಸ್ಟಿಪಿಐ ಸಹಯೋಗದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ₹26 ಕೋಟಿ ಮೊತ್ತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸುವುದು, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬೆಳಗಾವಿ ಸಂಸ್ಥೆಯ ಕೇಂದ್ರ ಕಚೇರಿಯ ಹಾಗೂ ಪ್ರಾದೇಶಿಕ ಕಚೇರಿ ಅಭಿವೃದ್ಧಿ ಕೈಗೊಳ್ಳಲು ₹42.93 ಕೋಟಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಕ್ ಲಾಗ್) ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಪುನರ್ ರಚನೆ ಮಾಡಲಾಗಿದ್ದು, ಉಪಸಮಿತಿ ಸಮಿತಿ ಅಧ್ಯಕ್ಷರನ್ನಾಗಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕರ್ಪೆ ಗ್ರಾಮದ ದೋಟದಲ್ಲಿ ಕಿಂಡಿ ಅಣ್ಣೆಕಟ್ಟು ನಿರ್ಮಾಣಕ್ಕೆ ₹36 ಕೋಟಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಕರ್ನಾಟಕ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ 1:15 ಅನುಪಾತ ನಿಗದಿಪಡಿಸಿ ನಿಯಮಾವಳಿ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ, ಕೋಲಾರ ಜಿಲ್ಲೆ ವೇಮಗಲ್ ಮತ್ತು ಕುರುಗಲ್ ಗ್ರಾಮ ಪಂಚಾಯಿತಿ, ಶೆಟ್ಟಿಹಳ್ಳಿ, ಚೌಡೇನಹಳ್ಳಿ ಗ್ರಾಮಳನ್ನು ಒಗ್ಗೂಡಿಸಿ ವೇಮಗಲ್ - ಕುರುಗಲ್ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸಲಾಗಿದೆ.
ಅದೇ ರೀತಿ ದಾವಣಗೆರೆ ಜಿಕ್ಕೆಯ ಹೊನ್ನಾಳಿ ಪಪಂ ಅನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ, ಬೆಳಗಾವಿಯ ಪೀರನವಾಡಿ ಗ್ರಾಪಂ ಮತ್ತು ಮಚ್ಚೆ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ, ದೇವದುರ್ಗ ತಾಲೂಕಿನ ಜಾಲಹಳ್ಳಿ ಮತ್ತು ಕರಡಿಗುಡ್ಡ ಗ್ರಾಮ ಪಂಚಾಯಿತಿ ಹಾಗೂ ಕೆಲವು ಗ್ರಾಮಗಳನ್ನು ಜಾಲಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ, ಯಲಹಂಕ ತಾಲೂಕಿನ ಜಾಲ ಹೋಬಳಿಯ ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಪುರಸಭೆಯನ್ನಾಗಿ ಮೇಲ್ದರ್ಜೆಗೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ಧಾರವಾಡ ರೈಲ್ವೆ ಸ್ಟೇಷನ್ ಯಾರ್ಡ್ನಲ್ಲಿ ₹16.48 ಕೋಟಿ ಅಂದಾಜು ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.