ಬೆಂಗಳೂರು: ಹೈಕಮಾಂಡ್ಗೆ 1800 ಕೋಟಿ ಕಪ್ಪ ಕೊಟ್ಟ ಕಾಂಗ್ರೆಸ್ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಳ್ಳಿಹಾಕಿದ್ದಾರೆ.
0ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಅವರ ನಾಯಕರು ವೈಚಾರಿಕವಾಗಿ ದಿವಾಳಿ ಆಗಿದ್ದಾರೆ. ಸಾರ್ವಜನಿಕವಾಗಿ ಚರ್ಚಿಸೋಕೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಮೋದಿ ಅವರ ಜನಪ್ರಿಯತೆ ಹೆಚ್ಚಾಗಿದ್ದರಿಂದ ಕಾಂಗ್ರೆಸ್ನವರು ಹತಾಶರಾಗಿದ್ದಾರೆ. ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಅಂತಾ ಗೊತ್ತಾಗಿದೆ. ಈ ಹಿಂದೆ ಈ ವಿಚಾರಚಾಗಿ ವಿಚಾರಣೆ ನಡೆದು ಅವೆಲ್ಲ ನಕಲಿ ಅಂತಾ ಗೊತ್ತಾಗಿದೆ. ಆದರೂ ನಕಲಿ ಸುದ್ದಿಗಳನ್ನು ಹರಡುವ ಉದ್ದೇಶ ಹೊಂದಿದ್ದಾರೆ. ಇದು ಅಪ್ರಸ್ತುತ ಮತ್ತು ಸುಳ್ಳಿನ ಕಂತೆ. ಈ ವಿಚಾರವಾಗಿ ಕಾನೂನು ತಜ್ಞರ ಜೊತೆ ಮಾತನಾಡಿ, ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕುಂದಗೋಳ ಶಾಸಕ, ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ನಿಧನಕ್ಕೆ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ, ಅವರ ಸಾವಿನ ಸುದ್ದಿ ಕೇಳಿ ಆಘಾತ ಆಗಿದೆ. ಅವರ ಕುಟುಂಬಕ್ಕೆ, ಬಂಧುಗಳಿಗೆ ಆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಟ್ವೀಟ್ ಮೂಲಕ ಬಿಜೆಪಿ ಟಾಂಗ್:
ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಹಗರಣ ಆರೋಪ ಮಾಡಿರುವ ಕಾಂಗ್ರೆಸ್ ಗೆ ಟ್ವಿಟ್ಟರ್ ಮೂಲಕ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ಆ ಡೈರಿ ನಕಲಿ, ಡೈರಿ ಬರಹ ಕಾಂಗ್ರೆಸ್ನವರ ಸ್ಕ್ರಿಪ್ಟ್ ಆಗಿದೆ. ಡೈರಿಯ ಕೈಬರಹ, ಸಹಿ ಕೂಡ ನಕಲಿ ಎಂದು ಹೇಳಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರ ಅಸಲಿ ಸಹಿ, ಕೈ ಬರಹ ಹಾಕು ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.