ETV Bharat / city

ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಕೆಲ ಹೊಸತುಗಳಿಗೆ ನಾಂದಿ ಹಾಡಿದ ಬಿಎಸ್​ವೈ ಬಜೆಟ್! - ಯಡಿಯೂರಪ್ಪ ಸರ್ಕಾರಕ್ಕೆ ಒಂದು ವರ್ಷ

ಯಡಿಯೂರಪ್ಪ ಸರ್ಕಾರ ಅಧಿಕಾರ ವಹಿಸಿಕೊಂಡ ಆರಂಭದಿಂದಲೂ ಸವಾಲುಗಳೇ ಹೆಚ್ಚಾಗಿ ಎದುರಾಗಿದ್ದು, ಅದರಲ್ಲೂ ಆರ್ಥಿಕ ಸಂಕಷ್ಟ ಬಿಜೆಪಿ ಸರ್ಕಾರವನ್ನು ಮೊದಲಿನಿಂದಲೂ ಬಹುವಾಗಿ ಕಾಡಿದ ಸವಾಲು. ಇದರ‌ ಮಧ್ಯೆ ಜನರ ಮೇಲೆ ಹೆಚ್ಚಿನ ಹೊರೆ ಹಾಕದಂತೆ, ವಾರ್ಷಿಕ ಆಯವ್ಯಯ ಮಂಡಿಸುವ ಅನಿವಾರ್ಯತೆ ಇತ್ತು. ಅದರಂತೆ ಸಿಎಂ ಯಡಿಯೂರಪ್ಪ ಕೆಲ ಹೊಸತನಗಳಿಂದ ಕೂಡಿದ ಸರಳ ಬಜೆಟ್ ಮಂಡಿಸಿದರು.

BSY Budget Begins For Some New Things Amid Economic Crisis
ಆರಂಭದಿಂದಲೂ ಕಾಡಿದ ಆರ್ಥಿಕ ಸಂಕಷ್ಟ:ಆರ್ಥಿಕ ಬಿಕ್ಕಟ್ಟು ಮಧ್ಯೆ ಕೆಲ ಹೊಸತುಗಳಿಗೆ ನಾಂದಿ ಹಾಡಿದ ಬಿಎಸ್​ವೈ ಬಜೆಟ್!
author img

By

Published : Jul 25, 2020, 10:41 PM IST

ಬೆಂಗಳೂರು: ಯಡಿಯೂರಪ್ಪ ಸರ್ಕಾರ ಇದೀಗ ಒಂದು ವರ್ಷ ಪೂರೈಸಿದೆ.‌ ವರ್ಷದ ಹರುಷದಲ್ಲಿರುವ ಸರ್ಕಾರಕ್ಕೆ ಆರಂಭದಿಂದಲೂ ಕಾಡಿದ್ದು, ಆರ್ಥಿಕ ಸಂಕಷ್ಟ. ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಯಡಿಯೂರಪ್ಪ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕಾಯಿತು. ಸೀಮಿತ ಸಂಪನ್ಮೂಲದಿಂದಲೇ ಹಿತ ಮಿತದಡಿ ಬಜೆಟ್ ಮಂಡಿಸಿದ ಸಿಎಂ ಕೆಲ ಹೊಸತುಗಳಿಗೆ ನಾಂದಿ ಹಾಡಿದರು.

ಯಡಿಯೂರಪ್ಪ ಸರ್ಕಾರಕ್ಕೆ ಅಧಿಕಾರ ಸ್ವೀಕರಿಸಿದ ಆರಂಭದಿಂದಲೂ ಸವಾಲುಗಳೇ ಹೆಚ್ಚಾಗಿ ಎದುರಾಗಿದ್ದು, ಅದರಲ್ಲೂ ಆರ್ಥಿಕ ಸಂಕಷ್ಟ ಬಿಜೆಪಿ ಸರ್ಕಾರವನ್ನು ಮೊದಲಿನಿಂದಲೂ ಬಹುವಾಗಿ ಕಾಡಿದ ಸವಾಲು. ತಮ್ಮ ಹೊಸ ಪರಿಕಲ್ಪನೆ, ಜನಪ್ರಿಯ ಯೋಜನೆಗಳನ್ನು ಘೋಷಿಸಲು ಬಿಗಿ ಆರ್ಥಿಕತೆ ಯಡಿಯೂರಪ್ಪ ಸರ್ಕಾರವನ್ನು ಕಟ್ಟಿ ಹಾಕಿತ್ತು. ಇದರ‌ ಮಧ್ಯೆ ಜನರ ಮೇಲೆ ಹೆಚ್ಚಿನ ಹೊರೆ ಹಾಕದಂತೆ, ವಾರ್ಷಿಕ ಆಯವ್ಯಯ ಮಂಡಿಸುವ ಅನಿವಾರ್ಯತೆ ಇತ್ತು. ಅದರಂತೆ ಸಿಎಂ ಯಡಿಯೂರಪ್ಪ ಕೆಲ ಹೊಸತನಗಳಿಂದ ಕೂಡಿದ ಸರಳ ಬಜೆಟ್ ಮಂಡಿಸಿದರು.

ರಾಜ್ಯದ ಬಜೆಟ್ ಇತಿಹಾಸದಲ್ಲಿ ಹೊಸ ಸಂಪ್ರದಾಯ ಆರಂಭಿಸಿದ ಸಿಎಂ ಯಡಿಯೂರಪ್ಪ, ಈ ಬಾರಿ ಇಲಾಖಾವಾರು ಬಜೆಟ್ ಮಂಡನೆಗೆ ಬ್ರೇಕ್ ಹಾಕಿ, ಇಲಾಖಾವಾರು ಬದಲು ವಲಯವಾರು ವಿಂಗಡಿಸಿ ಬಜೆಟ್ ಮಂಡನೆ ಮಾಡಿದರು. ಆರು ವಲಯದಲ್ಲಿ 34 ಇಲಾಖೆಗಳನ್ನು ಹಂಚಿಕೆ ಮಾಡುವ ಮೂಲಕ ಅನುದಾನ ಘೋಷಿಸಿದರು.

ಪ್ರತ್ಯೇಕ‌ ಮಕ್ಕಳ ಬಜೆಟ್ ಮಂಡನೆ: ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಹೊಸತನ ಮೆರೆದಿದ್ದ ಯಡಿಯೂರಪ್ಪ, ಮಾರ್ಚ್ ನಲ್ಲಿ ಮಂಡಿಸಿದ ಬಜೆಟ್​ನ​ಲ್ಲಿ ಮತ್ತೊಂದು ಹೊಸತನ ಮೆರೆದರು. ರಾಜ್ಯಲ್ಲಿ ಹೊಸದಾಗಿ ಈ ಭಾರಿ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದರು. ಕರ್ನಾಟಕ ರಾಜ್ಯದಲ್ಲಿರುವ 18 ವರ್ಷದ ಒಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯವ್ಯಯದಲ್ಲಿ 36,340 ಕೋಟಿ ರೂಪಾಯಿಗಳ 279 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದರು. ಇದು ಒಟ್ಟಾರೆ ಆಯವ್ಯಯ ಗಾತ್ರದ ಶೇ.15.28 ರಷ್ಟು ಆಗಿದೆ. ಬಜೆಟ್ ನಲ್ಲಿ ಮಕ್ಕಳಿಗೆ ಕೇಂದ್ರೀಕೃತ ಯೋಜನೆಗಳನ್ನು ಘೋಷಿಸಿದರು.

ಮಹಿಳೆಯರಿಗೆ ವಿಶೇಷ ಅನುದಾನ: 7ನೇ ಬಾರಿಗೆ ಬಜೆಟ್ ಮಂಡಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಆಯವ್ಯಯ ಪಟ್ಟಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಅನುದಾನ ಮೀಸಲಿಟ್ಟರು. ಮಹಿಳೆಯರ ಅಭಿವೃದ್ಧಿಗೆ 37,780 ಕೋಟಿ ರೂ. ಮೀಸಲಿಟ್ಟಿರುವ ಸಿಎಂ, ಮಹಿಳೆಯರಿಗೆ ಶೇ. 15.88ರಷ್ಟು ಅನುದಾನ ಘೋಷಿಸಿದರು. ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಬಲ ತುಂಬುವ ಉದ್ದೇಶದಿಂದ ಮಹಿಳಾ ಉದ್ಯಮಿಗಳಿಗೆ 20 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ, ವನಿತಾ ಸಂಗಾತಿ ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ ಸೇರಿ ಹಲವು ಮಹಿಳಾ ಕೇಂದ್ರಿತ ಕಾರ್ಯಕ್ರಮಗಳಿಗೆ ಒತ್ತು ನೀಡಿದರು.

ಬೆಂಗಳೂರಿಗೆ ಬಂಪರ್ ಕೊಡುಗೆ: ಸಿಎಂ ಯಡಿಯೂರಪ್ಪ ತಮ್ಮಬಜೆಟ್​ನ​ಲ್ಲಿ ಬೆಂಗಳೂರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದರು. ಬೆಂಗಳೂರು ಅಭಿವೃದ್ಧಿಗಾಗಿ ತಮ್ಮ ಆಯವ್ಯಯದಲ್ಲಿ 8,772 ಕೋಟಿ ರೂ. ಮೀಸಲಿಟ್ಟರು. ಇದರಲ್ಲಿ ಪ್ರಮುಖವಾಗಿ ಗಾರ್ಬೇಜ್ ಸಿಟಿ ಟ್ಯಾಗ್ ಕಳಚುವ ನಿಟ್ಡಿನಲ್ಲಿ ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ ರೂ. ಅನುದಾನ ಮೀಸಲಿಟ್ಟರು. ಅದರ ಜೊತೆಗೆ ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ., ನವನಗರೋತ್ಥಾನ ಯೋಜನೆಗೆ 317 ಕೋಟಿ ರೂ., ಮನೆಗಳಿಗೆ ನೀರು ನುಗ್ಗುವುದು ತಪ್ಪಿಸಲು 200 ಕೋಟಿ ರೂ., ಬೆಂಗಳೂರಿನ ಸುತ್ತ ಹಳ್ಳಿಗಳ ರಸ್ತೆ ದುರಸ್ಥಿಗೆ 500 ಕೋಟಿ ರೂ. ಘೋಷಿಸಿದರು.

ಬಹುನಿರೀಕ್ಷಿತ ಸಬ್​ ಅರ್ಬನ್ ರೈಲು ಯೋಜನೆಗೆ 500 ಕೋಟಿ ರೂ.‌ ಮೀಸಲಿಟ್ಟ ಬಿಜೆಪಿ ಸರ್ಕಾರ, 1500 ಹೊಸ ಡೀಸೆಲ್ ಬಸ್ ಖರೀದಿಗಾಗಿ ಬಿಎಂಟಿಸಿಗೆ 600 ಕೋಟಿ ರೂ. ನೀಡಿದರು. ಜೊತೆಗೆ 500 ಎಲೆಕ್ಟ್ರಿಕ್ ಬಸ್ ಖರೀದಿಗೆ 100 ಕೋಟಿ ರೂ., ಮೆಟ್ರೋ ಫೀಡರ್ ಸಾರಿಗೆಗೆ 90 ಎಲೆಕ್ಟ್ರಿಕ್ ಬಸ್ ಖರೀದಿಯ ಪ್ರಸ್ತಾಪಿಸಿದ್ದಾರೆ. ಟ್ರಾಫಿಕ್ ಹೆಚ್ಚಿರುವ 12 ಏರಿಯಾ ಅಭಿವೃದ್ಧಿಗೆ 500 ಕೋಟಿ ರೂ. ಮತ್ತೆ ರಸ್ತೆ ಸುರಕ್ಷತಾ ನಿಧಿಗೆ 200 ಕೋಟಿ ಅನುದಾನ ಘೋಷಿಸಿದ ಸಿಎಂ ಬಿಎಸ್ ವೈ ವಾಣಿಜ್ಯ ಪ್ರದೇಶದಲ್ಲಿ ಅಂಡರ್ಗ್ರೌಂಡ್ ಪಾರ್ಕಿಂಗ್‌ ಮಾಡಲೂ ಅನುದಾನ ಘೋಷಿಸಿದ್ದಾರೆ. ತಮ್ಮ ಬಜೆಟ್​ನ​ಲ್ಲಿ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಏರ್‌ ಪೋರ್ಟ್‌ಗೆ ಔಟರ್ ರಿಂಗ್ ರೋಡ್ ನಿರ್ಮಾಣಕ್ಕಾಗಿ 14,500 ಕೋಟಿ ಅನುದಾನ ಘೋಷಣೆ ಮಾಡಿದರು.

ನಾಡಪ್ರಭು ಪ್ರತಿಮೆ ನಿರ್ಮಾಣದ ಘೋಷಣೆ: ಇದರ ಜೊತೆಗೆ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ‌ ನಿರ್ಮಾಣಕ್ಕಾಗಿ 66 ಕೋಟಿ ರೂ. ಅನುದಾನ ಮೀಸಲಿಟ್ಟರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ 100 ಅಡಿ ಎತ್ತರದ ಕಂಚಿನ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಿಸಿದರು.

ರೈತರಿಗೂ‌ ಬಜೆಟ್​ನ​ಲ್ಲಿ ಬರಪೂರ ಕೊಡುಗೆ: ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಆಯವ್ಯದಲ್ಲಿ ಒಟ್ಟು 32,259 ಕೋಟಿ ರೂಪಾಯಿ ಅನುದಾನ ನೀಡಿ, ರೈತ ಪರ ನಾಯಕನೆಂಬುದನ್ನು ಮತ್ತೆ ಪ್ರಚುರ ಪಡಿಸಲು ಮುಂದಾದರು. ಪ್ರಮುಖವಾಗಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿದ್ದು, 466 ಕೋಟಿ ರೂಪಾಯಿ ನೆರವು ನೀಡಿದರು. ಅದೇ ರೀತಿ ಅಡಿಕೆ ಬೆಳೆಗಾರರ ಪ್ರಾಥಮಿಕ/ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿಯನ್ನೂ ಘೋಷಿಸಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂಪಾಯಿ ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2,600 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಯಿತು. ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ. ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂಪಾಯಿ ಘೋಷಿಸಿದರು. ಇದರ ಜೊತೆಗೆ ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ಕೊಯ್ಲೋತ್ತರ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹಗಳ ನಿರ್ಮಾಣ, ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5,000 ರೂಪಾಯಿಗಳಂತೆ ಗರಿಷ್ಠ 10,000 ರೂಪಾಯಿ ನೆರವು, ಕೊಳೆತು ಹೋಗಬಹುದಾದ ಹೂವು, ಹಣ್ಣು ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬೈ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲು ಯೋಜನೆಯ ಸೌಲಭ್ಯದ ಬಳಕೆ ಮಾಡಲು ಪ್ರಸ್ತಾಪಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.