ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕೇಂದ್ರಕ್ಕೆ ಬಂದು ಸಚಿವರಾಗುವಂತೆ ಆಹ್ವಾನ ನೀಡಿದ್ದರು. ಆದರೆ ನಾನು ಬೇಡ ಎಂದು ಹೇಳಿದ್ದೆ. ಹೀಗಾಗಿ ರಾಜ್ಯಪಾಲ ಹುದ್ದೆ ಸೇರಿದಂತೆ ಕೇಂದ್ರದಲ್ಲಿ ಯಾವುದೇ ಹುದ್ದೆಯನ್ನು ಇನ್ಮುಂದೆ ಸ್ವೀಕರಿಸುವುದಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜಭವನದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯಪಾಲ ಹುದ್ದೆಯ ಪ್ರಶ್ನೆಯೇ ಬರುವುದಿಲ್ಲ. ಪಕ್ಷ ಸಂಘಟನೆಯನ್ನು ಬಲ ಪಡಿಸಲು ರಾಜ್ಯದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತೇನೆಯೇ ಹೊರತು ಯಾವುದೇ ಸ್ಥಾನ ಮಾನ ಕೇಳಲಿಲ್ಲ. ಕೊಟ್ರೂ ತೆಗೆದುಕೊಳ್ಳುವುದಿಲ್ಲ. ಪಕ್ಷವನ್ನು ಬಲಪಡಿಸಲು ಕೆಲಸ ಮಾಡುತ್ತೇನೆ ಎಂದು ರಾಜ್ಯದ ಆರೂವರೆ ಕೋಟಿ ಜನರಿಗೆ ಭರವಸೆಯನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣದಲ್ಲಿ ಕೇಸರಿ ಕೋಟೆ ಕಟ್ಟಿದ ಧೀರ.. ವಿದಾಯ ಭಾಷಣದಲ್ಲಿ ಭಾವೋದ್ವೇಗಕ್ಕೊಳಗಾದ ಶಿಕಾರಿ'ಶೂರ'..