ಬೆಂಗಳೂರು: ಉಪ ಸಮರದಲ್ಲಿ ನಿರೀಕ್ಷಿತ ಫಲಿತಾಂಶ ಕಾಣದ ಕೇಸರಿ ಪಡೆಯಲ್ಲಿ ನಾಳೆ (ಮಂಗಳವಾರ) ಇಡೀ ದಿನ ಭರ್ಜರಿ ರಾಜಕೀಯ ವಿದ್ಯಮಾನಗಳು ಜರುಗಲಿವೆ. ಸಿಎಂ ತವರು ಜಿಲ್ಲೆ ಹಾನಗಲ್ ಸೋಲಿನ ಆತ್ಮಾವಲೋಕನ ಸಭೆ, ಸಂಘಟನೆ ಚುರುಕಿಗೆ ಪದಾಧಿಕಾರಿಗಳ ಸಭೆ ಹಾಗು ಬಿಬಿಎಂಪಿ ಚುನಾವಣೆ ತಯಾರಿ ಜತೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ಈಗಾಗಲೇ ಹಾನಗಲ್ ಸೋಲಿನ ಕುರಿತು ಹೈಕಮಾಂಡ್ ರಾಜ್ಯ ಘಟಕದಿಂದ ವರದಿ ನೀಡಿದ್ದು, ನಾಳೆ (ಮಂಗಳವಾರ) ಸೋಲಿನ ಕಾರಣ ಕುರಿತು ಆತ್ಮಾವಲೋಕನ ಸಭೆ ನಡೆಸಲಾಗುತ್ತದೆ. ಎಲ್ಲಿ ಎಡವಲಾಯಿತು?. ಲೋಪಗಳೇನು?, ಭವಿಷ್ಯದಲ್ಲಿ ಕ್ಷೇತ್ರ ಮರಳಿ ಪಡೆಯಲು ಮಾಡಬೇಕಿರುವ ತಂತ್ರಗಳ ಕುರಿತು ಸಮಾಲೋಚನೆ ನಡೆಸಿ, ವಿಸ್ತೃತವಾದ ವರದಿಯನ್ನು ಅರುಣ್ ಸಿಂಗ್ ಮೂಲಕ ಹೈಕಮಾಂಡ್ಗೆ ತಲುಪಿಸಲಾಗುತ್ತದೆ.
ನಂತರ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಭವಿಷ್ಯದ ಚುನಾವಣೆಗಳಿಗೆ ಸಿದ್ಧತೆ ಆರಂಭ, ಸಂಘಟನೆ ಚುರುಕುಗೊಳಿಸುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ. ಅತಿದೊಡ್ಡ ರಾಜಕೀಯ ಪಕ್ಷವಾದರೂ ಇತ್ತೀಚಿನ ಉಪ ಸಮರದ ಫಲಿತಾಂಶ ಹೈಕಮಾಂಡ್ಗೆ ಬೇಸರ ತರಿಸಿದ್ದು, ಮತ್ತೆ ಸಂಘಟನೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಕುರಿತು ಚರ್ಚಿಸಲಾಗುತ್ತದೆ.
ಬಿಬಿಎಂಪಿ ಗದ್ದುಗೆ ಪಡೆಯಲು ಸರ್ಕಸ್:
ಸದ್ಯದಲ್ಲಿಯೇ ಬಿಬಿಎಂಪಿ ಚುನಾವಣೆ ಎದುರಾಗಲಿದ್ದು, ಈ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ. ಕಳೆದ ಬಾರಿ ಅತಿದೊಡ್ಡ ಪಕ್ಷವಾದರೂ ಅಧಿಕಾರ ಹಿಡಿಯಲು ವಿಫಲವಾಗಿ ಕಡೆಯ ಅವಧಿಯ ಒಂದು ವರ್ಷಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹಾಗಾಗಿ ಈ ಬಾರಿ ಶತಾಯ ಗತಾಯ ಬಿಬಿಎಂಪಿ ಗದ್ದುಗೆ ಪಡೆಯಲು ಸರ್ಕಸ್ ನಡೆಸುತ್ತಿದ್ದು, ಪಾಲಿಕೆ ಚುನಾವಣಾ ಸಿದ್ದತೆ ಕುರಿತು ಸಭೆ ನಡೆಸಲಾಗುತ್ತದೆ.
ಸರಣಿ ಸಭೆಗಳ ನಂತರ ಸಂಜೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಬೆಳಗ್ಗೆಯಿಂದ ನಡೆದ ಸಭೆಗಳ ನಿರ್ಣಯ ಅವಲೋಕನ ಮಾಡಲಿದ್ದು, ಪರಿಷತ್ ಚುನಾವಣೆ ಸೇರಿ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗುತ್ತದೆ ಎನ್ನಲಾಗ್ತಿದೆ.
ಸಭೆಗಳಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಇಂದು ಸಂಜೆ 6.25 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅರುಣ್ ಸಿಂಗ್ ಕೆ.ಕೆ.ಗೆಸ್ಟ್ ಹೌಸ್‌ಗೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ.
ಮಂಗಳವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಚುನಾವಣಾ ಸಿದ್ಧತಾ ಸಭೆ, ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ರಾತ್ರಿ ಅವರು ಕೆ.ಕೆ.ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಬೆಳಿಗ್ಗೆ ಅವರು ವಿಮಾನದಲ್ಲಿ ದೆಹಲಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಎಲ್ಕೆಜಿ, ಯುಕೆಜಿ, ಅಂಗನವಾಡಿ ಪುನಾರಂಭ: ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪಾಲನೆ ಕಡ್ಡಾಯ