ಬೆಂಗಳೂರು:ಗುಜರಾತ್ನಂತೆ ನಮ್ಮ ರಾಜ್ಯದ ಪಠ್ಯದಲ್ಲೂ ಭಗವದ್ಗೀತೆ ಸೇರಿಸುವ ಪರವಾಗಿ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಭಗವದ್ಗೀತೆಯಲ್ಲಿ ಮಾನವೀಯತೆಯ ಮೌಲ್ಯವಿದೆ.
ಅದನ್ನು ಮಕ್ಕಳು ಓದುವ ಅಗತ್ಯವಿದೆ. ಅದ್ದರಿಂದ ಮಕ್ಕಳ ಜ್ಞಾನ ಅಭಿವೃದ್ಧಿ ಆಗಲಿದೆ. ಈಗಾಗಲೇ ಗುಜರಾತ್ ಸರ್ಕಾರ ಪಠ್ಯ ಕ್ರಮದಲ್ಲಿ ಸೇರಿಸಲು ಮುಂದಾಗಿದೆ. ನಮ್ಮ ರಾಜ್ಯದಲ್ಲೂ ಪಠ್ಯ ಕ್ರಮದಲ್ಲಿ ಸೇರಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ತಂದರೆ ನಾನು ಸ್ವಾಗತ ಮಾಡುತ್ತೇನೆ. ಕೆಲವರಿಗೆ ಮುಜುಗರ ಆಗಬಹುದು. 'ದಿ ಕಾಶ್ಮೀರ್ ಫೈಲ್ಸ್' ವಿಚಾರವಾಗಿ ಸ್ಪೀಕರ್ ಸಿನಿಮಾ ನೋಡಲು ಕರೆದಿದ್ರು. ಆದರೆ, ಯಾರೂ ಬರಲಿಲ್ಲ. ನೀವು ಈ ದೇಶದಲ್ಲಿ ನೆಲೆಸಲು ನಾಲಾಯಕ್. ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ, ಬಂದ್ಗೆ ಕರೆ ಕೊಟ್ಟಿದ್ದಾರೆ. ನಿಮ್ಮಿಂದ ಮಕ್ಕಳ ವಿಧ್ಯಾಭ್ಯಾಸ ಹಾಳಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕುಡಚಿ ರಾಜೀವ್ ಮಾತನಾಡಿ, ಯಾವುದೇ ಒಂದು ವಿಷಯದ ಆಳ ಅರ್ಥವನ್ನು ತಿಳಿದುಕೊಂಡು ಮಾತಾಡಬೇಕು. ಇಲ್ಲದಿದ್ದರೆ ವ್ಯರ್ಥ. ಆ ಮಾತಿಗೆ ಆಳ ಇರಬೇಕು. ಹತ್ತು ವರ್ಷಗಳಿಂದ ನಾನು ನಿರಂತರವಾಗಿ ಭಗವದ್ಗೀತೆ ಓದುತ್ತಿದ್ದೇನೆ. ನನ್ನದೇ ಆದ ಯೂಟ್ಯೂಬ್ ಇದೆ. ಭಗವದ್ಗೀತೆ ಮಾನವ ಶಾಸ್ತ್ರ, ರಾಜಕೀಯ ಶಾಸ್ತ್ರ, ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥ ಎಂದು ಅಭಿಪ್ರಾಯ ಪಟ್ಟರು.
ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಏನನ್ನೂ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ