ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಾಗಿದ್ದರೆ, ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಮೋದಿಯಲ್ಲ. 60 ವರ್ಷಗಳಲ್ಲಿ ಏನೂ ಕೊಡಲು ಸಾಧ್ಯವಾಗದ ಹೇಡಿ ಕಾಂಗ್ರೆಸ್ ಮೋದಿ ವಿರುದ್ಧ ಆರೋಪ ಮಾಡುತ್ತಿದೆ ಎಂದರೆ ಜನ ಅವರನ್ನು ಮೂರ್ಖ ಎನ್ನುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಯೋಗ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ, ಕೋವಿಡ್ ಬಂದಿದ್ದಾಗ ಬಾರದೇ ಜನದ್ರೋಹ ಮಾಡಿದ ಮೋದಿ ಈಗ ಯೋಗ ಮಾಡಲು ಬಂದಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು. ಕೋವಿಡ್ ನಿಯಂತ್ರಣ, ಉಚಿತ ಲಸಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವೆಂಟಿಲೇಟರ್ ಒದಗಿಸಿದವರು ಮೋದಿ. ಪ್ರತಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದು ಮೋದಿ. ಹಿಂದೆ ಮಲೇರಿಯಾ ಬಂದಾಗ ಅವರಿಗೆ ಔಷಧ ಕೊಡಕ್ಕಾಗಲಿಲ್ಲ. ಆದರೆ, ಮೋದಿ ಸರ್ಕಾರ ಕೋವಿಡ್ ಬಂದಾಗ ಲಸಿಕೆ ಕೊಟ್ಟಿದೆ ಎಂದು ಸಮರ್ಥಿಸಿಕೊಂಡರು.
ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಆಗಲು ಕಾಂಗ್ರೆಸ್ ಕಾರಣ. ಅವರು ಅಧಿಕಾರದಲ್ಲಿದ್ದಾಗ ಆಕ್ಸಿಜನ್ ಪ್ಲಾಂಟ್ ಮಾಡಲಿಲ್ಲ. ಅವರ ಕಾಲದಲ್ಲಿ ವೆಂಟಿಲೇಟರ್ಗಳು ಜಿಲ್ಲಾಸ್ಪತ್ರೆಗಳಲ್ಲಿ ಇರಲಿಲ್ಲ. ವೈದ್ಯರು, ಬೆಡ್ಗಳು, ದಾದಿಯರು ಇರಲಿಲ್ಲ. 60 ವರ್ಷದಲ್ಲಿ ಇದೆಲ್ಲವನ್ನುಕೊಡಲಾಗದ ಕಾಂಗ್ರೆಸ್ನ ಹೇಡಿ ನಾಯಕ ಈಗ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಮೈಸೂರಿಗೆ ಬಂದು ಕನ್ನಡ ನಾಡಿದ ಜನತೆಯ ಜೊತೆ ಯೋಗ ಮಾಡಿ ಜಗತ್ತಿಗೆ ಸಂದೇಶ ಕೊಟ್ಟಿದ್ದಾರೆ. ಕನ್ನಡ ನಾಡಿನಲ್ಲಿ ಯೋಗ ದಿನ ಆಚರಿಸಿದ್ದಕ್ಕೆ ಮೋದಿಗೆ ಧನ್ಯವಾದ ಸಲ್ಲಿಸುವುದಾಗಿ ಕಟೀಲ್ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು: ಸಿ ಟಿ ರವಿ