ಬೆಂಗಳೂರು: ಮಾಧ್ಯಮಗಳ ಮುಂದೆ ಅನಗತ್ಯವಾಗಿ ಹೇಳಿಕೆ ನೀಡದಂತೆ ಸಚಿವರು ಮತ್ತು ಶಾಸಕರಿಗೆ ಬಿಜೆಪಿ ರಾಜ್ಯ ಘಟಕ ಸೂಚನೆ ನೀಡಿದೆ. ಸಿಡಿ ವಿವಾದದ ನಂತರ ಈ ಸಂಬಂಧ ಮುಖಂಡರು ಹೇಳಿಕೆ ನೀಡುವುದಕ್ಕೆ ಪಕ್ಷ ಬ್ರೇಕ್ ಹಾಕಿದೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ನೂತನ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದರು. ಸಿಎಂ ಬಿಎಸ್ವೈ ಜೊತೆ ಕೆಲಕಾಲ ಮಾತುಕತೆ ನಡೆಸಿ, ಖಾತೆ ಹಂಚಿಕೆ ಬಗ್ಗೆ ಪ್ರಸ್ತಾಪ ಮಾಡಿದರು. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಚರ್ಚೆ ಬೇಡ. ಸೋಮವಾರ ಖಾತೆ ಹಂಚಿಕೆ ಬಗ್ಗೆ ಚರ್ಚಿಸೋಣ ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಮಾಧ್ಯಮಗಳಿಗೆ ಉಮೇಶ್ ಕತ್ತಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕತ್ತಿ ನಂತರ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಿಎಂ ನಿವಾಸಕ್ಕೆ ಭೇಟಿ ನೀಡಿ, ಸಂಕ್ರಾಂತಿ ಹಬ್ಬದ ಶುಭ ಕೋರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ ಚವ್ಹಾಣ್, ಯಾರೂ ಮಾತನಾಡಬಾರದು ಎಂದು ಪಕ್ಷದಿಂದ ಸೂಚನೆ ಕೊಡಲಾಗಿದೆ ಹಾಗಾಗಿ ನಾನು ಮಾತನಾಡುವುದಿಲ್ಲ ಎನ್ನುತ್ತಾ ನಿರ್ಗಮಿಸಿದರು.
ನಂತರ ಡಿಸಿಎಂ ಗೋವಿಂದ ಕಾರಜೋಳ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ್ದು, ಬಳಿಕ ಹೆದ್ದಾರಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಮಾರಂಭದ ನಂತರ ನಿರ್ಗಮಿಸುವ ವೇಳೆ ಸಾಮಾನ್ಯವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಆದರೆ, ಇಂದು ಯಾವುದೇ ಹೇಳಿಕೆ ನೀಡದೇ ನಿರ್ಗಮಿಸಿದರು.
ಒಟ್ಟಿನಲ್ಲಿ ಸಿಡಿ ವಿಷಯ ಹಾಗೂ ಸಂಪುಟ ವಿಸ್ತರಣೆ ನಂತರ ಅಸಮಾಧಾನ ಸ್ಫೋಟ ಮತ್ತಷ್ಟು ಜಟಿಲವಾಗಬಾರದು ಎಂದು ಈ ವಿಷಯದ ಬಗ್ಗೆ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡುವುದಕ್ಕೆ ರಾಜ್ಯ ಘಟಕ ಬ್ರೇಕ್ ಹಾಕಿದ್ದು, ಅನಗತ್ಯವಾಗಿ ಯಾರೂ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಸೂಚನೆ ನೀಡಿದೆ ಎನ್ನಲಾಗಿದೆ.