ಬೆಂಗಳೂರು: ಈ ಸರ್ಕಾರ ಬಂದ ನಂತರ ಎಲ್ಲರಿಗೂ ಅನ್ಯಾಯ ಆಗಿದೆ. ಕಲಾವಿದರಿಗೆ ಸಾಕಷ್ಟು ಅನ್ಯಾಯ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.
ಬಸವೇಶ್ವರನಗರದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಮೇಲೆ ಪ್ರೋತ್ಸಹಧನ ಕೊಡುತ್ತೇವೆ. ಕೆಪಿಸಿಸಿ ಸಾಂಸ್ಕೃತಿಕ ಘಟಕ ಆರಂಭಿಸಲಿದ್ದೇವೆ ಎಂದು ಭರವಸೆ ನೀಡಿದರು.
ಸಿಡಿ ಪ್ರಕರಣ ಎಸ್ಐಟಿಗೆ ವಹಿಸಿದ ಹಿನ್ನೆಲೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಎಸ್ಐಟಿ ರಚನೆ ಬಗ್ಗೆ ಮಾತನಾಡೋಣ. ಇನ್ನು ಬಹಳ ಇದೆ ಮಾತನಾಡೋಣ ಎಂದರು.
ಎಸ್ಐಟಿ ರಚನೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಒಮ್ಮೆ ಸಿಡಿ ನಕಲಿ ಎಂದು ಹೇಳ್ತಾರೆ. ಒಮ್ಮೆ ಸಿಐಡಿ, ಎಸ್ಐಟಿ, ಸಿಬಿಐ ಬೇಕು ಎನ್ನುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಅವರು ಅಧಿಕಾರದಲ್ಲಿ ಇದ್ದಾರೆ. ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಿಡಿ ಬಗ್ಗೆ ಎಲ್ಲಿ ಹೇಳಬೇಕೋ ಅಲ್ಲಿ ಹೇಳ್ತೀವಿ. ಸಿಡಿ ಕರ್ಮಕಾಂಡ ದೇಶ ನೋಡಿದೆ ಎಂದು ಕಿಡಿಕಾರಿದರು.
ಭ್ರಷ್ಟ ಮುಖ್ಯಮಂತ್ರಿ ಎಂದು ಮಾಜಿ ಸಚಿವರೊಬ್ಬರು ಹೇಳಿದ್ದಾರೆ. ಅಪ್ಪ-ಮಗನ ವಿಚಾರಣೆ ಮಾಡಬೇಕು ಎಂದು ಮತ್ತೊಬ್ಬ ಬಿಜೆಪಿ ಮುಖಂಡ ಹೇಳಿದ್ದಾರೆ. ರಾಜ್ಯದ ಜನ ಛೀ ಥೂ ಎಂದು ಹೇಳ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಮುಂದೆ ಎಲ್ಲವೂ ಹೇಳ್ತೀವಿ ಎಂದರು.