ಬೆಂಗಳೂರು: ಬಾಗಲಕೋಟೆ ಹಾಲಿ ಸಂಸದ ಗದ್ದಿಗೌಡರ್ಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಜಿಲ್ಲೆಯ ಕೆಲ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ಯುವ ನಾಯಕ ಸಂತೋಷ್ ಹುಕ್ರಾಣಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಯಡಿಯೂರಪ್ಪ ಸ್ಪಷ್ಟ ಭರವಸೆ ನೀಡದೆ ನಿರ್ಗಮಿಸಿದ್ದು, ಕಾರ್ಯಕರ್ತರಲ್ಲಿ ಅಸಮಾಧಾನ ಮೂಡುವಂತೆ ಮಾಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಲೋಕಸಭಾ ಟಿಕೆಟ್ ಲಾಬಿ ಆರಂಭಗೊಂಡಿದೆ. ಬಾಗಲಕೋಟೆ ಕ್ಷೇತ್ರದಿಂದ ಸಂತೋಷ ಹುಕ್ರಾಣಿ ಅವರಿಗೆ ಟಿಕೆಟ್ ನೀಡುವಂತೆ ಜಿಲ್ಲೆಯ ಕೆಲ ನಾಯಕರ ನಿಯೋಗ ಯಡಿಯೂರಪ್ಪಗೆ ಮನವಿ ಸಲ್ಲಿಸಿದೆ.
ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಲಿ ಸಂಸದ ಗದ್ದಿಗೌಡರ್ ಬದಲಾಗಿ ಯುವ ಮುಖಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು. ಯಡಿಯೂರಪ್ಪ ವಾಕಿಂಗ್ ಮುಗಿಸಿ ಮನೆಗೆ ವಾಪಸಾಗುವ ವೇಳೆ ಮನವಿ ಸಲ್ಲಿಸಿದರು. ಮನವಿ ಪತ್ರ ಪಡೆದ ಬಿಎಸ್ವೈ ಯಾವುದೇ ಭರವಸೆ ನೀಡದೆ ಮನೆಗೆ ತೆರಳಿದರು.
ಯಡಿಯೂರಪ್ಪ ಅವರ ಈ ನಡೆ ಬಾಗಲಕೋಟೆಯಿಂದ ಬಂದಿದ್ದ ಬಿಜೆಪಿ ಕಾರ್ಯಕರ್ತರಿಗೆ ಅಸಮಾಧಾನ ತರಿಸಿದೆ. ನಮ್ಮ ಮನವಿಗೆ ಯಡಿಯೂರಪ್ಪ ಸ್ಪಂದಿಸಿಲ್ಲ. ಕನಿಷ್ಠ ಬೇಡಿಕೆ ಏನು ಅಂತಾ ಕೇಳುವ ಸೌಜನ್ಯವನ್ನೂ ತೋರಿಲ್ಲ. ನಾವು ಅಷ್ಟು ದೂರದಿಂದ ಬಂದಿದ್ದರೂ ಸ್ಪಂದಿಸಿಲ್ಲ. ನಮಗೆ ಬಹಳ ನೋವಾಗಿದೆ. ಹೀಗಾದರೆ ಪಕ್ಷ ಕಟ್ಟೋದು ಕಷ್ಟ ಎಂದು ಯಡಿಯೂರಪ್ಪ ನಿವಾಸದ ಮುಂದೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.