ಬೆಂಗಳೂರು: ನೂತನ ಮೋಟಾರು ವಾಹನ ಕಾಯ್ದೆಯಿಂದ ಎಚ್ಚೆತ್ತುಕೊಂಡ ಬೈಕ್ ಸವಾರನೋರ್ವ ತನ್ನ ವಿರುದ್ಧ ದಾಖಲಾಗಿದ್ದ 104 ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದ ದಂಡವನ್ನು ಒಟ್ಟಿಗೆ ಪಾವತಿಸಿದ್ದಾನೆ. ಈ ಮೂಲಕ ತನ್ನ ಬೈಕ್ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಂದ ಮುಕ್ತಿ ಪಡೆದಿದ್ದಾನೆ.
ಜಾಲಹಳ್ಳಿ ನಿವಾಸಿ ಮೊಹಮ್ಮದ್ ಶಬ್ಬೀರ್ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿದಂತೆ ಇವರ ವಿರುದ್ಧ ಒಟ್ಟು 104 ಕೇಸ್ಗಳು ದಾಖಲಾಗಿದ್ದವು. ಜಾಲಹಳ್ಳಿ ಸಂಚಾರಿ ಠಾಣೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಪತ್ತೆಯಾಗಿದ್ದವು. ಆಗ ಶಬ್ಬೀರ್ನನ್ನು ಹಿಡಿದು ಹೊಸ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದ ಬಗ್ಗೆ ಅರಿವು ಮೂಡಿಸಿದ್ದರು. ಹೀಗಾಗಿ ನಗರದ ವಿವಿಧ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ತನ್ನ ದ್ವಿಚಕ್ರ ವಾಹನದ ವಿರುದ್ಧ ದಾಖಲಾಗಿದ್ದ ಹಳೇ ದಂಡ ಸುಮಾರು 10 ಸಾವಿರ ರೂಪಾಯಿಯನ್ನು ಪಾವತಿಸಿದ್ದಾನೆ ಎಂದು ತಿಳಿದು ಬಂದಿದೆ.