ಬೆಂಗಳೂರು : ವೇಗವಾಗಿ ಬೆಂಜ್ ಕಾರು ಚಲಾಯಿಸಿದ ಪರಿಣಾಮ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿರುವ ಘಟನೆ ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಅಸ್ಸೋಂ ಮೂಲದ ಹರಿತಾಪ ಸಾವನ್ನಪ್ಪಿದ್ದಾನೆ. ಈತ ಕಳೆದ 10ವರ್ಷದಿಂದ ಪಬ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಬೆಂಜ್ ಕಾರಿನ ಚಾಲಕ ಸುವೀದ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಇಂದಿರಾನಗರ 80ನೇ ಅಡಿ ರಸ್ತೆಯಲ್ಲಿ ಬರುವ ತಿಪ್ಪಸಂದ್ರ ಬಳಿ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದೆ.
ವೇಗವಾಗಿ ಬೆಂಜ್ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ಹೊಡೆದ ಪರಿಣಾಮ ಮುಂದಿನ ಎರಡು ಆಟೋ ಹಾಗೂ ಒಂದು ಮಿನಿ ಲಾರಿ ಮಧ್ಯೆ ಅಪಘಾತವಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ.
![ಬೆಂಗಳೂರಲ್ಲಿ ಸರಣಿ ವಾಹನ ಅಪಘಾತ, Serial Accident in Bengaluru](https://etvbharatimages.akamaized.net/etvbharat/prod-images/kn-bng-07-serial-accident-7202806_07122021162054_0712f_1638874254_555.jpg)
ಬೆಂಜ್ ಕಾರು ವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಇದು ನಂದಿತಾ ಚೌದ್ರಿ ಎಂಬುವರಿಗೆ ಸೇರಿದ ಕಾರು ಎಂದು ಗೊತ್ತಾಗಿದೆ. ಹಲಸೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಂಜ್ ಕಾರು ಚಾಲಕ ವೇಗವಾಗಿ ಚಲಾಯಿಸಿರುವುದು ಕಂಡುಬಂದಿದೆ.
![ಬೆಂಗಳೂರಲ್ಲಿ ಸರಣಿ ವಾಹನ ಅಪಘಾತ, Serial Accident in Bengaluru](https://etvbharatimages.akamaized.net/etvbharat/prod-images/kn-bng-07-serial-accident-7202806_07122021162054_0712f_1638874254_695.jpg)
(ಇದನ್ನೂ ಓದಿ: ಯುವಕರ ಗೂಂಡಾಗಿರಿ.. ಪೊಲೀಸರ ಮೇಲೆ ಹಲ್ಲೆ.. ವಿಡಿಯೋದಲ್ಲಿ ಕೃತ್ಯ ಸೆರೆ)