ದೇವನಹಳ್ಳಿ: ಬೆಂಗಳೂರಿನ ಖ್ಯಾತ ತಾಳವಾದ್ಯ ವಾದಕ ಗಿರಿಧರ್ ಉಡುಪ ಘಟಂ ವಾದ್ಯದೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ, ಖಾಸಗಿ ಕಂಪನಿ ವಿಮಾನದಲ್ಲಿನ ಲಗೇಜ್ ನಿರ್ವಹಣೆಯ ವೈಫಲ್ಯದಿಂದ ಅವರ ಘಟಂ ವಾದ್ಯ ಚೂರು ಚೂರಾಗಿದೆ.
ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿ ಗಿರಿಧರ್ ಉಡುಪ ಕಳೆದ ಬುಧವಾರ ಬೆಂಗಳೂರಿನಿಂದ ದೆಹಲಿಗೆ ವಿಮಾನ ಪ್ರಯಾಣ ಬೆಳಸಿದ್ದರು. ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ 6E 869 ವಿಮಾನದಲ್ಲಿ ದೆಹಲಿ ಪ್ರಯಾಣ ಬೆಳೆಸಿದ್ದು, ಗ್ರ್ಯಾಮಿ ವಿಜೇತ ರಿಕಿ ಕೇಜ್ ಅವರ ಸಂಗೀತ ಕಚೇರಿಯಲ್ಲಿ ಘಟಂ ವಾದ್ಯ ನುಡಿಸಬೇಕಿತ್ತು.
ಸಂಗೀತ ಕಚೇರಿ ನೀಡುವ ಸಲುವಾಗಿ ತಮ್ಮ ನೀಲಿ ಬಣ್ಣದ ಸೂಟ್ ಕೇಸ್ ನಲ್ಲಿ ಘಟಂ ವಾದ್ಯವನ್ನ ಸುರಕ್ಷಿತವಾಗಿ ಪ್ಯಾಕ್ ಮಾಡಿದ್ದರು. ಆದರೆ, ದೆಹಲಿ ತಲುಪಿದ ನಂತರ ಸೂಟ್ ಕೇಸ್ನಲ್ಲಿದ್ದ ಘಟಂ ವಾದ್ಯ ಚೂರು ಚೂರಾಗಿತ್ತು. ಇದರಿಂದ ಸಂಗೀತ ಕಚೇರಿ ನೀಡಲು ತೊಂದರೆಯಾಗಿತ್ತು.
ಈ ಬಗ್ಗೆ ಇಂಡಿಗೋ ಸಂಸ್ಥೆಗೆ ದೂರು ನೀಡಿದರೂ 72 ಗಂಟೆಗಳ ತನಕ ಯಾವುದೇ ಸ್ಪಂದನೆ ಮಾಡಿರಲಿಲ್ಲ. ಘಟನೆ ಕುರಿತು ಗಿರಿಧರ್ ಉಡುಪ ತಮ್ಮ ನೋವು ತೊಡಿಕೊಂಡರು. ತಕ್ಷಣವೇ ಎಚ್ಚೆತ್ತ ಇಂಡಿಗೋ ಸಂಸ್ಥೆ ಘಟನೆ ಕುರಿತು ಕ್ಷಮೆ ಕೇಳಿದೆ ಮತ್ತು ಪರಿಹಾರ ಸಹ ಒದಗಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಮೃತ ಮಹೋತ್ಸವ ನಡಿಗೆ ಭಾರತದಲ್ಲಿ ಒಂದು ದೊಡ್ಡ ಚರಿತ್ರೆ ಸೃಷ್ಟಿಸಿದೆ..ಡಿಕೆಶಿ