ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಸದ್ಯ ಈ ಬಗ್ಗೆ ಅಧ್ಯಯನ ನಡೆಸಿರುವ ಟ್ರಾಫಿಕ್ ಡಿಪಾರ್ಟ್ಮೆಂಟ್, ಇದಕ್ಕೆ ಪ್ರಮುಖ ಕಾರಣ ಏನು ಅನ್ನುವುದರ ಕುರಿತು ಸರ್ವೆ ನಡೆಸಿ ಸ್ಟ್ರಾಂಗ್ ನಿರ್ಧಾರವೊಂದನ್ನ ತೆಗೆದುಕೊಂಡಿದೆ.
ಹೌದು, ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಮನೆಗೊಂದು ವಾಹನ ಎಂಬಂತೆ ಮೊದಲು ಒಂದು ವಾಹನ ಇಟ್ಟುಕೊಳ್ಳುತ್ತಿದ್ದ ಜನ ಇದೀಗ ಮನೆಮಂದಿಗೊಂದು-ಎರಡು ಎಂಬಂತೆ ವಾಹನಗಳನ್ನಿಟ್ಟುಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವು ಉಪಯೋಗಕ್ಕೆ ಬಂದ್ರೆ, ಇನ್ನೂ ಕೆಲವು ಉಪಯೋಗಕ್ಕೆ ಬಾರದವು ಅನ್ನೋದು ಟ್ರಾಫಿಕ್ ಡಿಪಾರ್ಟ್ಮೆಂಟ್ ಸರ್ವೆಯಿಂದ ಬೆಳಕಿಗೆ ಬಂದಿದೆ.
ಸಿಟಿಯಲ್ಲಿ ಕೆಲ ರಸ್ತೆಗಳ ಬದಿಯಲ್ಲಿ ಉಪಯೋಗಕ್ಕೆ ಬಾರದ ವಾಹನಗಳು ನಿಂತಿವೆಯಂತೆ. ಇದರಿಂದಲೇ ಸಿಟಿಯಲ್ಲಿ ಟ್ರಾಫಿಕ್ ಹೆಚ್ಚಾಗ್ತಿದೆ ಅಂತಾರೆ ಟ್ರಾಫಿಕ್ನ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್. ರಸ್ತೆ ಕಿರಿದಾಗಿರೋದ್ರಿಂದ ಈ ರೀತಿ ಸುಮಾರು ವರ್ಷಗಳಿಂದ ವಾಹನ ನಿಲ್ಲಿಸಿದ್ರೆ ಜನರಿಗೆ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸುಮಾರು 700 ವಾಹನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಕೂಡಲೇ ವಾಹನ ತೆರವುಗೊಳಿಸುವಂತೆ ವಾರ್ನ್ ಮಾಡಲಾಗಿದೆ. ಅಲ್ಲದೆ ರೈಲ್ವೆ ಸ್ಟೇಷನ್ ಇರುವ ಮುಖ್ಯ ರಸ್ತೆಯಲ್ಲೇ ಈ ರೀತಿ ವಾಹನ ನಿಲ್ಲಿಸಿದ್ರೆ ತುಂಬಾ ಸಮಸ್ಯೆಯಾಗುತ್ತದೆ ಎನ್ನುವುದು ಪೊಲೀಸರ ಮಾತು.
ನಗರದಲ್ಲಿ ಪ್ರಮುಖವಾಗಿ ಮಲ್ಲೇಶ್ವರಂ, ರಾಜಾಜಿನಗರ, ಬಸವೇಶ್ವರನಗರ, ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮೋದಿ ರಸ್ತೆ, ನವರಂಗ್ ಮೊದಲಾದ ಕಡೆಗಳಲ್ಲಿ ಸುಮಾರು ಎರಡು ವರ್ಷಗಳಿಂದ ವಾಹನಗಳನ್ನ ನಿಲ್ಲಿಸಲಾಗಿದೆ. ಈ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಸುಮಾರು 700 ಜನರಿಗೆ ನೋಟಿಸ್ ನೀಡಲಾಗಿದ್ದು, ಒಂದು ವೇಳೆ ನೋಟಿಸ್ಗೆ ಪ್ರತಿಕ್ರಿಯೆ ನೀಡದೇ ಹೋದರೆ ಎಲ್ಲಾ ವಾಹನಗಳನ್ನ ಸರ್ಕಾರಕ್ಕೆ ಒಪ್ಪಿಸಿ ಹರಾಜು ಹಾಕುವ ಪ್ಲ್ಯಾನ್ನಲ್ಲಿದೆ ಟ್ರಾಫಿಕ್ ಡಿಪಾರ್ಟ್ಮೆಂಟ್. ಒಂದು ವೇಳೆ ವಾಹನ ತೆಗೆದುಕೊಂಡು ಹೋಗುವಾಗ ನಮ್ಮದು ವಾಹನ ಎಂದು ಯಾರಾದ್ರು ಬಂದರೆ ಪ್ರತ್ಯೇಕ ದಂಡ ವಿಧಿಸಲು ಕೂಡ ಪೊಲೀಸರು ಯೋಚನೆ ಮಾಡಿದ್ದಾರೆ. ಈ ಸಂಬಂಧ ಸರ್ಕಾರಕ್ಕೂ ಕೂಡ ಒಂದು ಪತ್ರ ಬರೆಯಲಾಗಿದೆ.