ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ 'ಮನೆ ಬಾಗಿಲಿಗೆ ಶಾಲೆ' ಎಂಬ ಯೋಜನೆ ರೂಪಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಇಂದು ನಗರದ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಗರ ಕಾರ್ಯಪಡೆ ಸಮಿತಿಯ ಸದಸ್ಯರುಗಳಿಗೆ 'ಮಕ್ಕಳಿಂದ ಭಿಕ್ಷಾಟನೆ ಹಾಗೂ ಬೀದಿಗಳಲ್ಲಿ ವ್ಯಾಪಾರ' ತಡೆಯುವ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಶ್ರೀಶಾನಂದ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ 'ಮನೆ ಬಾಗಿಲಿಗೆ ಶಾಲೆ' ಎಂಬ ಯೋಜನೆ ರೂಪಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಬಿಎಂಟಿಸಿ ವ್ಯವಸ್ಥಾಪ ನಿರ್ದೇಶಕರ ಜೊತೆ ಮಾತನಾಡಿದ್ದು, ಸ್ಲಂಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಮನೆ ಬಾಗಿಲಿಗೆ ಶಾಲೆ ಎಂಬ ಪರಿಕಲ್ಪನೆಯಡಿ ಬಸ್ಗಳನ್ನೇ ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸ ನೀಡಲು ಯೋಜನೆ ರೂಪಿಸಲಾಗಿದೆ.
ಬಸ್ಗಳನ್ನೇ ಶಾಲೆಯಾಗಿ ಪರಿವರ್ತಿಸಲು 10 ಬಸ್ : ಈ ಸಂಬಂಧ ಬಿಎಂಟಿಸಿಯಿಂದ ಈಗಾಗಲೇ ಪಾಲಿಕೆಯು 10 ಬಸ್ಗಳನ್ನು ಪಡೆದಿದ್ದು, ಬಸ್‌ಗಳಿಗೆ ಹೊಸ ರೂಪ ನೀಡಲಾಗಿದೆ. ಪಾಲಿಕೆ ವತಿಯಿಂದಲೇ ಶಿಕ್ಷಕರು ಹಾಗೂ ಚಾಲಕರನ್ನು ನೇಮಕ ಮಾಡಿ ಹೆಚ್ಚು ಮಕ್ಕಳಿರುವ ಕೊಳಗೇರಿ ಪ್ರದೇಶಗಳಿಗೆ ಬಸ್ಗಳನ್ನು ಕಳುಹಿಸಿ ಪಾಠ ಕಲಿಸಲಾಗುತ್ತದೆ.
ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಇದಕ್ಕೆ ಶೀಘ್ರ ಅಧಿಕೃತ ಚಾಲನೆ ನೀಡಲಿದ್ದಾರೆ. ಚಾಲನೆ ನೀಡಿದ ಬಳಿಕ ಹೆಚ್ಚು ಮಕ್ಕಳಿರುವ ಕೊಳಗೇರಿ ಪ್ರದೇಶಗಳನ್ನು ಗುರುತಿಸಿ ಅಲ್ಲಿಗೆ ಶಾಲಾ ವಾಹವನ್ನು ಕಳುಹಿಸಿ ವಿದ್ಯಾಭ್ಯಾಸ ನೀಡಿ ಸುಶಿಕ್ಷಿತರನ್ನಾಗಿಲು ಕ್ರಮವಹಿಲಾಗುವುದು ಎಂದು ಆಯುಕ್ತರಾರ ಮಂಜುನಾಥ್ ಪ್ರಸಾದ್ ತಿಳಿಸಿದರು.
ಭಿಕ್ಷಾಟನೆ ಮತ್ತು ಆಟಿಕೆ ಮಾರಾಟ ಮಾಡ್ತಿರುವ ಮಕ್ಕಳ ಸಮೀಕ್ಷೆ : ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳು ಭಿಕ್ಷಾಟನೆ ಹಾಗೂ ಬೀದಿಗಳಲ್ಲಿ ವ್ಯಾಪಾರ ತಡೆಯುವ ಸಂಬಂಧ ಈ ಕಾರ್ಯಗಾರದಲ್ಲಿ ಯಾವ ರೀತಿ ಸಮೀಕ್ಷೆ ನಡೆಸಬೇಕು ಎಂಬುದರ ಬಗ್ಗೆ ನಗರ ಕಾರ್ಯಪಡೆ ಸಮಿತಿಯ ಸದಸ್ಯರುಗಳಿಗೆ ಮಾಹಿತಿ ನೀಡಲಾಗುತ್ತದೆ.
ಮಕ್ಕಳು ಸಿಗ್ನಲ್, ಬೀದಿಗಳಲ್ಲಿ, ದೇವಸ್ಥಾನ, ಮಾರುಕಟ್ಟೆ, ಬಸ್-ರೈಲು ನಿಲ್ದಾಣ, ಹೋಟೆಲ್, ರೆಸ್ಟೋರೆಂಟ್ಸ್ ಸೇರಿ ಇನ್ನಿತರೆ ಕಡೆ ನಿತ್ಯ ಭಿಕ್ಷಾಟಣೆ-ಆಟಿಕೆಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಯಾವ ಕಾರಣಕ್ಕಾಗಿ ಮಕ್ಕಳು ಭಿಕ್ಷಾಟಣೆ-ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದಾರೆ, ಅವರ ಹಿನ್ನೆಲೆ ಏನು ಎಂಬುದರ ಬಗ್ಗೆ ನಿಖರ ಮಾಹಿತಿ ಕಲೆ ಹಾಕಬೇಕಿದೆ.
ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಹಾಗೂ ರಸ್ತೆ ಬದಿ-ಸಿಗ್ನಲ್‌ಗಳಲ್ಲಿ ಆಟಿಕೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಈ ಸಂಬಂಧ ಈಗಾಗಲೇ ಪಾಲಿಕೆ ಅಧಿಕಾರಿಗಳು ಹಾಗೂ ಕೆಲವು ಎನ್‌ಜಿಒ ಸಂಸ್ಥೆಗಳ ಜೊತೆ ಸಭೆ ನಡೆಸಲಾಗಿದೆ. ಪ್ರತಿ ಮಾಹಿತಿಯನ್ನು ಕಲೆ ಹಾಕುವ ವೇಳೆ ನಿಖರವಾಗಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿದಾಗ ಮಾತ್ರ ನಮಗೆ ಸಮರ್ಪಕ ಮಾಹಿತಿ ಲಭ್ಯವಾಗಲಿದೆ. ಆ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಮಕ್ಕಳು ಭಿಕ್ಷಾಟನೆ ಮಾಡುವ ಹಾಗೂ ಆಟಿಕೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಕಡಿವಾಣ ಹಾಕಬಹುದಾಗಿದೆ ಎಂದರು.