ಬೆಂಗಳೂರು: ನಗರದಲ್ಲಿ ಕೋವಿಡ್ ಎರಡನೇ ಅಲೆ ಸಾಕಷ್ಟು ಸಾವು - ನೋವು ಒಡ್ಡಿದ ಹಿನ್ನೆಲೆ ಎಚ್ಚೆತ್ತಿರುವ ಬಿಬಿಎಂಪಿ ಮೂರನೇ ಅಲೆ ಹೆಚ್ಚು ಬಾಧಿಸದಂತೆ ತಡೆಯಲು ಈಗಿನಿಂದಲೇ ಸಿದ್ಧತೆ ನಡೆಸಿದೆ.
ಪ್ರತಿ ವಲಯ ಮಟ್ಟದಲ್ಲೂ ತಂಡಗಳನ್ನು ರಚಿಸಿ, ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. 18-44 ವರ್ಷದವರಿಗೆ ವ್ಯಾಕ್ಸಿನ್ ವಿತರಣೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನೇಷನ್ ಆಗುವ ರೀತಿ ನೋಡಿಕೊಳ್ಳಲಾಗ್ತಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಹೆಚ್ಚಾದಂತೆ ಹೆಚ್ಚೆಚ್ಚು ಲಸಿಕಾ ಕೇಂದ್ರಗಳ ಮೂಲಕ ಕೊಡಲು ಸಿದ್ಧತೆ ಮಾಡಲಾಗಿದೆ.
ಇನ್ನು ಹೊರದೇಶಗಳ ಬೆಳವಣಿಗೆ ಗಮನಿಸಿ, ನಾಲ್ಕೈದು ತಿಂಗಳ ಬಳಿಕ ಮೂರನೇ ಅಲೆ ನಗರಕ್ಕೂ ಬಾಧಿಸುವ ಹಿನ್ನೆಲೆ ಸಿಸಿಸಿ ಕೇಂದ್ರಗಳು, ಟ್ರಯಾಸ್ ಸೆಂಟರ್, ಕೋವಿಡ್ ಟೆಸ್ಟಿಂಗ್, ವ್ಯಾಕ್ಸಿನೇಷನ್ ಸೆಂಟರ್ಗಳನ್ನು ಸಧ್ಯಕ್ಕೆ ಮುಚ್ಚಲಾಗುವುದಿಲ್ಲ. ಪ್ರಕರಣ ಹೆಚ್ಚಾದಂತೆ ಬಳಕೆ ಮಾಡಲು ಸಿದ್ಧವಾಗಿಡಲು ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆಕ್ಸಿಜನ್ ಬೇಡಿಕೆ ಕಡಿಮೆಯಾಗಿದೆ
ನಗರದ ಆಮ್ಲಜನಕ ಪೂರೈಕೆಯ ನೋಡಲ್ ಅಧಿಕಾರಿ ಹಾಗೂ ವಲಯ ಆಯುಕ್ತರಾಗಿರುವ ರಂದೀಪ್ ಮಾತನಾಡಿ, ಸದ್ಯ ನಗರದಲ್ಲಿ ಆಕ್ಸಿಜನ್ ಬೇಡಿಕೆ ಕಡಿಮೆಯಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೇಡಿಕೆ ತಗ್ಗಿದೆ ಎಂದು ತಿಳಿಸಿದರು.
ಐಸಿಯು ಬೆಡ್ಗಳ ಕೊರತೆ ಇದೆ. ಜನರಲ್ ಹಾಗೂ ಹೆಚ್ಡಿಯು ಬೆಡ್ಗಳು ಖಾಲಿ ಇವೆ. ಆಕ್ಸಿಜನ್ ಬಳಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಆಮ್ಲಜನಕದ ಹಂಚಿಕೆ ಕಡಿಮೆ ಆಗದಂತೆ ಯೋಜನೆ ರೂಪಿಸಲಾಗುವುದು. ರಾಜ್ಯ ಮಟ್ಟದಲ್ಲಿ ಮುನೀಶ್ ಮೌದ್ಗಿಲ್ ಅಧಿಕಾರಿಯ ನೇತೃತ್ವದಲ್ಲಿಯೂ ಈ ಮೇಲ್ವಿಚಾರಣೆ ನಡೆಯುತ್ತಿದೆ ಎಂದರು.
ಮಕ್ಕಳ ಚಿಕಿತ್ಸೆ ಚಿಂತನೆ, ಪೋಷಕರಿಗೆ ತರಬೇತಿ
ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಹೆಚ್ಚು ಬಾಧಿಸಬಹುದು ಎಂಬ ನಿರೀಕ್ಷೆ ಇದೆ. ಈ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಯಾಗಿದ್ದು ಕ್ರಮಕೈಗೊಳ್ಳಲಾಗುತ್ತಿದೆ. ಸಿಸಿಸಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೇಕಾದ ಹಾಸಿಗೆಗಳ ತಯಾರಿ ಹಾಗೂ ಅವರ ಜೊತೆಗೆ ಪೋಷಕರೂ ಇರಬೇಕಾದ ಸಂದರ್ಭದಲ್ಲಿ ಅವರಿಗೂ ರಕ್ಷಣೆ ನೀಡಬೇಕಾಗುತ್ತದೆ. ಪೋಷಕರಿಗೂ ಪಿಪಿಇ ಕಿಟ್ ಅಥವಾ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆಯೂ ಬೇಕಾಗಬಹುದು.
ಜೊತೆಗೆ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆಯೂ ಪೋಷಕರಿಗೆ ತರಬೇತಿ ನೀಡಲಾಗುತ್ತದೆ. ಈ ಬಗ್ಗೆ ಮುಂಬೈ ಮಾದರಿಯನ್ನು ನೋಡಿಕೊಂಡು ಮಾಡಲಾಗುವುದು. ಕೆಲವು ಆಸ್ಪತ್ರೆಗಳನ್ನು ಮಕ್ಕಳ ಆಸ್ಪತ್ರೆಯಾಗಿಯೇ ಪರಿವರ್ತಿಸುವ ಚಿಂತನೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆರಿಗೆ ಆಸ್ಪತ್ರೆಗಳಿದ್ದು, ಜೊತೆಗೆ ಕೋವಿಡ್ ಕೇರ್ ಸೆಂಟರ್ಗಳನ್ನು ಕೂಡಾ ಪ್ರತ್ಯೇಕವಾಗಿ ಮಕ್ಕಳಿಗೆ ಮೀಸಲಿಡಲಾಗುವುದು ಎಂದರು.
ಕೋವಿಡ್ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ
ನಗರದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿದ್ದು, ಯಾವುದನ್ನು ವಾಪಸ್ ಮಾಡದೇ ಪಾಲಿಕೆ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳಲಾಗುವುದು. ಆಕ್ಸಿಜನ್ ಬೆಡ್ಗಳ ಅನಿವಾರ್ಯತೆ ಮುಂದಾದರೂ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಸದ್ಯ ಪ್ರತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತರು 25 ಲಕ್ಷ ರೂ. ಅನುದಾನಗಳನ್ನು ನೀಡಿದ್ದು, ಇತರ ಅಗತ್ಯ ವಸ್ತುಗಳನ್ನು ವಲಯಮಟ್ಟದಲ್ಲೇ ಖರೀದಿಸಲು ಅನುಮತಿ ನೀಡಲಾಗಿದೆ. ಎಮರ್ಜೆನ್ಸಿ ಫಂಡ್ ಗಳಿಂದಲೂ ಬಳಕೆಮಾಡಿಕೊಳ್ಳಲಾಗ್ತಿದೆ. ಕೋವಿಡ್ ನಿರ್ವಹಣೆಗೆ ಹಣಕಾಸಿನ ಕೊರತೆಯಾಗಿಲ್ಲ. ಮುಂದಿ ದಿನಗಳಲ್ಲಿ ಸಿಬ್ಬಂದಿ, ವೈದ್ಯರು, ಮಕ್ಕಳ ತಜ್ಞರ ಕೊರತೆಯಾಗದಂತೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ರಂದೀಪ್ ಮಾಹಿತಿ ನೀಡಿದರು.