ಬೆಂಗಳೂರು: ಬಿಬಿಎಂಪಿಯ ಡೆತ್ ಆಡಿಟ್ನಲ್ಲಿ ಭಯಾನಕ ಸುದ್ದಿಯೊಂದು ಹೊರಬಿದ್ದಿದೆ. ನಾನಾ ಕಾರಣಗಳಿಂದ ಮೇ 2 ರಿಂದ ಮೇ 19 ರವರೆಗೆ ಒಟ್ಟು 778 ಮಂದಿ ಕೋವಿಡ್ ಸೋಂಕಿತರು ಮನೆಯಲ್ಲೇ ಮೃತಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯಲ್ಲೇ ಇಷ್ಟು ಸಾವನ್ನಪ್ಪಿರುವ ಪ್ರಕರಣಗಳು ನಿಜಕ್ಕೂ ಆತಂಕ ಮೂಡಿಸಿದೆ. ಚಿಕಿತ್ಸೆ, ಬೆಡ್ ಸಿಗದೆ ಮತ್ತು ಸೋಂಕಿನ ಬಗ್ಗೆ ಅರಿವು ಇಲ್ಲದೆ ಜನರು ಮೃತಪಟ್ಟಿದ್ದಾರೆ. ಸಾವಿಗೆ ಬಿಬಿಎಂಪಿಯ ವೈಫಲ್ಯ ಕೂಡಾ ಕಾರಣವಾಗಿದೆ ಎನ್ನಲಾಗ್ತಿದೆ.
ಮೇ 6 ರಂದು 52 ಜನ, ಮೇ- 7 ರಂದು 64 ಜನ, ಮೇ-10 ರಂದು 70 ಜನ, ಮೇ -11 ರಂದು 61 ಜನ, ಮೇ -17 ರಂದು 70 ಜನ, ಮೇ-18 ರಂದು 86 ಹೀಗೆ ನಿತ್ಯ ತಮ್ಮ ಮನೆಯಲ್ಲಿಯೇ ಸೋಂಕಿತರು ಮೃತಪಟ್ಟಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಕೂಡಾ ಕಡಿಮೆ ಮಾಡಲಾಗುತ್ತಿದೆ. ಸೋಂಕನ್ನು ತಕ್ಷಣ ಪತ್ತೆಹಚ್ಚುವಲ್ಲಿ ವಿಫಲವಾದ ಕಾರಣ, ತೀವ್ರ ಸ್ವರೂಪಕ್ಕೆ ಹೋಗಿ ಮೃತಪಡುತ್ತಿದ್ದಾರೆ. ಇನ್ನೊಂದೆಡೆ ಕೋವಿಡ್ ರಿಪೋರ್ಟ್ ತಡವಾಗಿ ಬರುವ ಹಿನ್ನೆಲೆ, ಸ್ವ್ಯಾಬ್ ಟೆಸ್ಟ್ ಕೊಟ್ಟು ರಿಪೋರ್ಟ್ ಬರುವ ಮುನ್ನವೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, 778 ಜನ ಹೋಂ ಐಸೋಲೇಷನ್ನಲ್ಲೇ ಮೃತಪಟ್ಟಿದ್ದಾರೆ ಎಂದು ಡೆತ್ ರಿಪೋರ್ಟ್ ಮೂಲಕ ಗೊತ್ತಾಗಿದೆ. ಎಲ್ಲೆಲ್ಲಿ ಕೋವಿಡ್ ಸೋಂಕಿತರು ಮೃತಪಡುತ್ತಿದ್ದಾರೆ, ಆಸ್ಪತ್ರೆಯಲ್ಲಿಯೋ, ಮನೆಯಲ್ಲಿಯೂ, ಆಮ್ಲಜನಕದ ಕೊರತೆಯಿಂದಲೂ, ಐಸಿಯೂ ಬೆಡ್ ಸಮಸ್ಯೆಯಿಂದಲೋ ಎಂಬ ಬಗ್ಗೆ ಆಳವಾದ ತನಿಖೆ ಆಗಬೇಕಿದೆ ಎಂದರು. ಈ ಬಗ್ಗೆ ವಿಸ್ತೃತ ವರದಿ ನೀಡಲು ತಿಳಿಸಲಾಗಿದೆ ಎಂದು ಹೇಳಿದರು.
ಸಾವಿನ ಸಂಖ್ಯೆಯಲ್ಲಿ ಅಮೆರಿಕವನ್ನೇ ಹಿಂದಿಕ್ಕಿದ ಭಾರತ
ಇನ್ನೊಂದೆಡೆ ಒಂದು ದಿನದ ಸಾವಿನ ದಾಖಲೆಯಲ್ಲಿ ಅಮೆರಿಕವನ್ನೇ ಭಾರತ ಹಿಂದಿಕ್ಕಿದೆ. 2021 ಏಪ್ರಿಲ್ನಲ್ಲಿ ಅಮೆರಿಕಾದಲ್ಲಿ 4468 ಜನ ಸಾವನ್ನಪ್ಪಿದ್ದರು. ಭಾರತದಲ್ಲಿ ಒಂದೇ ದಿನ 4529 ಜನ ಕೋವಿಡ್ಗೆ ಬಲಿಯಾಗಿರುವುದು ಇತ್ತೀಚೆಗೆ ವರದಿಯಾಗಿತ್ತು.
- ಕೊರೊನಾ ಸಾವಿನ ಸಂಖ್ಯೆಯಲ್ಲಿ ರಾಜ್ಯಕ್ಕೆ 2 ನೇ ಸ್ಥಾನ
- ಮಹಾರಾಷ್ಟ್ರ- 83,777 ಸಾವು
- ಕರ್ನಾಟಕ -22,838 ಸಾವು
- ದೆಹಲಿ- 22,111 ಸಾವು
- ತಮಿಳುನಾಡು -18,369 ಸಾವು
- ಉತ್ತರ ಭಾರತ- 18,072 ಸಾವು
- ರಾಜ್ಯದ ಐದು ಜಿಲ್ಲೆಗಳಲ್ಲಿ ಮರಣ ಪ್ರಮಾಣ ಏರಿಕೆ
- ಹಾವೇರಿ ಶೇ. 4.46ರಷ್ಟು
- ಬೀದರ್ ಶೇ. 2.29ರಷ್ಟು
- ಕಲಬುರಗಿ ಶೇ. 2.14ರಷ್ಟು
- ವಿಜಯಪುರ ಶೇ. 1.85ರಷ್ಟು
- ರಾಮನಗರ ಶೇ. 1.60ರಷ್ಟು