ಬೆಂಗಳೂರು : ರಾಜ್ಯ ಯುವಜನ ಸಬಲೀಕರಣಕ್ಕೆ ಸರ್ಕಾರ ಮಹತ್ವವನ್ನು ನೀಡಿದೆ. ನೂತನ ಯುವ ನೀತಿಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರ್ಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಟನ್ ವಿನಿಮಯ ಕಾರ್ಯಕ್ರಮದಲ್ಲಿ ಇಂದು ಆನ್ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಅತ್ಯುತ್ತಮ ಕೋಚ್ಗಳ ಮೂಲಕ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಅತ್ಯಗತ್ಯ.
ಕ್ರೀಡಾಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್ಗಳು ಮಾಡಬೇಕಾದ ಅಗತ್ಯವಿದೆ. ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದರು.
72 ದೇಶಗಳ ಒಕ್ಕೂಟ ರಚನೆಯಾಗಿ ಹಲವಾರು ವಿಚಾರಗಳ ವಿನಿಮಯಕ್ಕೆ ಕಾಮನ್ವೆಲ್ತ್ ಒಕ್ಕೂಟ ವೇದಿಕೆಯಾಗಿದೆ. ಸಮಾನ ಚಿಂತನೆ ಇರುವ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳ್ಳಲು, ಅದರಲ್ಲೂ ಯುವಪೀಳಿಗೆಯಲ್ಲಿ ಬಾಂಧವ್ಯ ಮುಂದುವರೆಯಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕ್ರೀಡೆಗೆ ಕೇಂದ್ರದಿಂದ ಹೆಚ್ಚಿನ ಪ್ರೋತ್ಸಾಹ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ರೀಡಾ ಲೋಕಕ್ಕೆ ಹೊಸ ಚಿಂತನೆ ಹಾಗೂ ಆಯಾಮಗಳನ್ನು ನೀಡಿದ್ದಾರೆ. ಖೇಲೋ ಇಂಡಿಯಾ ಪ್ರಾರಂಭಿಸಿ ಹಳ್ಳಿ ಹಳ್ಳಿಗಳಲ್ಲಿ ವ್ಯವಸ್ಥಿತವಾಗಿ ಕ್ರೀಡಾಕೂಟಗಳು ನಡೆಯುತ್ತಿವೆ.
ಜೀತೋ ಇಂಡಿಯಾ ಕಾರ್ಯಕ್ರಮ ಕ್ರೀಡಾಳುಗಳಿಗೆ ಬಹು ದೊಡ್ಡ ಸ್ಫೂರ್ತಿ ನೀಡಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಯಿತು ಎಂದು ನೆನೆದರು.
ಕರ್ನಾಟಕ ರಾಜ್ಯ ಯುವಜನ ಸಬಲೀಕರಣಕ್ಕೆ ಮಹತ್ವವನ್ನು ನೀಡಿದೆ. ನೂತನ ಯುವ ನೀತಿಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಕರ್ನಾಟಕ ಕ್ರೀಡೆಗೆ ವರದಾನವೆಂಬಂತೆ ಸ್ವತಃ ಕ್ರೀಡಾ ಪಟುವಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದೊರೆತಿದ್ದಾರೆ. ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ: ಅಯ್ಯಪ್ಪನಿಗೆ ವಜ್ರದ ಕಿರೀಟ ಅರ್ಪಿಸಿದ ಆಂಧ್ರದ ಭಕ್ತ.. ಕಾರಣ ಇಷ್ಟೇ..