ಬೆಂಗಳೂರು: ಆಟೋ ಚಾಲಕರಿಗೆ ಸಹಾಯಧನ ನೀಡಲು ವಿಧಿಸಿರುವ ನಿಯಮಗಳನ್ನು ಸರಳೀಕರಿಸುವಂತೆ ಒತ್ತಾಯಿಸಿ ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಡೈರಿ ವೃತ್ತದ ಬಳಿಯಿರುವ ಕಾರ್ಮಿಕ ಇಲಾಖೆ ಕಮಿಷನರ್ ಕಚೇರಿ ಮುಂಭಾಗ ಆಟೋ ಚಾಲಕರು, ಖಾಸಗಿ ವಾಹನಗಳ ಚಾಲಕರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಆಟೋ ಚಾಲಕರಿಗೆ ಸರ್ಕಾರ ನೀಡಲಿರುವ 5 ಸಾವಿರ ರೂಪಾಯಿ ಸಹಾಯಧನ ಪಡೆಯಲು ವಿಧಿಸಿರುವ ನಿಯಮ ಹಾಗೂ ಷರತ್ತುಗಳಿಂದ ಆಟೋ ಚಾಲಕರು ಸಹಾಯಧನ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಈ ನಿಯಮವನ್ನು ಸಡಿಲಗೊಳಿಸಬೇಕು.
ಪ್ರತಿ ಆಟೋ ಚಾಲಕರು ಪ್ರತಿದಿನ ದುಡಿದು ಜೀವನ ಸಾಗಿಸಬೇಕು. ಕಳೆದ ಎರಡು ತಿಂಗಳಿನಿಂದ ನಮಗೆ ಯಾವುದೇ ದುಡಿಮೆ ಇಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಆಟೋ ಚಾಲಕ ಜಯರಾಂ ಆಗ್ರಹಿಸಿದರು. ಒಂದು ವೇಳೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಅವರು ತಿಳಿಸಿದ್ದಾರೆ.