ಬೆಂಗಳೂರು: ರಾಜಕಾರಣಿಗಳು ಪರಿಚಯ ಇರುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ ಪ್ರಕರಣ ಸಂಬಂಧ ಶಂಕರಪುರ ಪೊಲೀಸರ ಬಂಧನಕ್ಕೆ ಒಳಗಾಗಿರುವ ಆರೋಪಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ದೆಹಲಿ ಮೂಲದ ಉದ್ಯಮಿ ಬೇಶಾಂಬರ್ ನೀಡಿದ ದೂರಿನ ಮೇರೆಗೆ ಆರೋಪಿ ರಾಘವೇಂದ್ರ ಸೇರಿ ಇಬ್ಬರ ವಿರುದ್ಧ ವಂಚನೆ ಹಾಗೂ ನಂಬಿಕೆ ದ್ರೋಹದಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮುಂಬೈ ಮೂಲದ ರಾಜ್ ಕುಮಾರ್ ಅಗರ್ವಾಲ್ ಬಳ್ಳಾರಿಯ ಸಂಡೂರಿನಲ್ಲಿ 550 ಎಕರೆ ಜಾಗದಲ್ಲಿ ಗಣಿಗಾರಿಕೆ ನಡೆಸಲು ಲೀಸ್ಗೆ ಪಡೆದುಕೊಂಡಿರುವುದಾಗಿ ಸುಳ್ಳು ಹೇಳಿ ದೂರುದಾರ ಬೇಶಾಂಬರ್ ನನ್ನು ನಂಬಿಸಿದ್ದ. ಇದನ್ನು ನಂಬಿ ದೂರುದಾರನ ಪರವಾಗಿ ಸ್ನೇಹಿತ ರಾಧಾಕೃಷ್ಣ ಅಯ್ಯರ್ ಮುಖಾಂತರ ಆರೋಪಿ ಅಗರ್ವಾಲ್ ನೊಂದಿಗೆ 2014ರಲ್ಲಿ ಮಾತುಕತೆ ನಡೆಸಿ ಇಬ್ಬರು ಒಡಂಬಡಿಕೆ ಮಾಡಿಕೊಂಡಿದ್ದರು. ಬಳಕ ಮೈನಿಂಗ್ ನಡೆಸಲು ಸರ್ಕಾರದಿಂದ ನಿರಪೇಕ್ಷಣಾ ಪತ್ರ (ಎನ್ಓಸಿ) ತೆಗೆದುಕೊಳ್ಳಬೇಕೆಂದು ಹೇಳಿ ಅಗರ್ವಾಲ್ 50 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದಾನೆ.
2015ರ ಬಳಿಕ ಉದ್ಯಮಿ ಬೇಶಾಂಬರ್ ಗೆಳಯನಾದ ರಾಧಾಕೃಷ್ಣನನಿಗೆ ಬೆಂಗಳೂರಿನಲ್ಲಿ ಮತ್ತೋರ್ವ ಆರೋಪಿಯಾದ ರಾಘವೇಂದ್ರನ ಪರಿಚಯವಾಗಿದೆ. ಈತ ತನಗೆ ರಾಜಕೀಯ ನಾಯಕರು, ಹಿರಿಯ ಪೊಲೀಸ್ ಅಧಿಕಾರಿಗಳು ಪರಿಚಯವಿರುವುದಾಗಿ ಬಿಂಬಿಸಿಕೊಂಡಿದ್ದ. ಇದನ್ನು ನಂಬಿ ಅಗರವಾಲ್ ಜೊತೆ ಮಾಡಿಕೊಂಡಿದ್ದ ಒಪ್ಪಂದ ಬಗ್ಗೆ ಹೇಳಿದ್ದಾನೆ. ನನಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಗ ರಾಕೇಶ್ ಪರಿಚಯವಿದೆ. ಅವರ ಮೂಲಕ ಎನ್ಒಸಿ ಕೊಡಿಸಲು 4 ಕೋಟಿ ರೂ. ಖರ್ಚಾಗಲಿದೆ ಎಂದು ರಾಘವೇಂದ್ರ ಹೇಳಿದ್ದ. ಇದರಂತೆ ಮುಂಗಡವಾಗಿ ರಾಧಾಕೃಷ್ಣ ಮೂಲಕ ಒಂದು ಕೋಟಿ ರೂ. ನೀಡಿದ್ದಾರೆ.
ಕೆಲ ತಿಂಗಳ ಬಳಿಕ ಎನ್ಒಸಿ ಬಗ್ಗೆ ಪ್ರಶ್ನಿಸಿದಾಗ ಗಣಿಗಾರಿಕೆ ವಿಚಾರವಾಗಿ ಎಸ್ಐಟಿ ರಚನೆ ಆಗಿ ತನಿಖೆ ನಡೆಯುತ್ತಿದ್ದು, ಎನ್ಒಸಿ ನೀಡಲು ಆಗುವುದಿಲ್ಲ ಎಂದಿದ್ದಾನೆ. ಹಣ ವಾಪಸ್ ಕೇಳಿದರೆ ರೌಡಿಗಳಿಂದ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಆರೋಪಿ ರಾಘವೇಂದ್ರ ಶಂಕರಪುರ ಪೊಲೀಸರ ವಶದಲ್ಲಿದ್ದಾನೆ. ಪೊಲೀಸ್ ಕಸ್ಟಡಿ ಮುಗಿದ ಬಳಿಕ ಬಾಡಿ ವಾರಂಟ್ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.