ಬೆಂಗಳೂರು: ಸರ್ಕಾರಕ್ಕೆ ತೆರಿಗೆ ವಂಚಿಸಿ ಚೀನಾ ನಿರ್ಮಿತ ಎಲೆಕ್ಟ್ರಾನಿಕ್ ಉಪಕರಣಗಳನ್ನ ಅಕ್ರಮವಾಗಿ ಸಂಗ್ರಹಿಸಿದ್ದ ಅಡ್ಡೆ ಮೇಲೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಚೀನಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ವಸ್ತುಗಳ ಬಳಕೆ ಕುರಿತಂತೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಯುತ್ತಿದೆ. ಈ ಮಧ್ಯೆ ಕೊರೊನಾ ವೈರಸ್ನ ಹುಟ್ಟೂರಾದ ಚೀನಾದ ವುಹಾನ್ ಪ್ರಾಂತ್ಯದ ಮಧ್ಯವರ್ತಿಗಳ ನೆರವಿನಿಂದ ವ್ಯಕ್ತಿಯೊಬ್ಬ ನಗರದ ಓಲ್ಡ್ ಏರ್ಪೋರ್ಟ್ ರಸ್ತೆ ಖಾಸಗಿ ಕಟ್ಟಡವನ್ನ ಗುತ್ತಿಗೆ ಪಡೆದು, ಚೀನಾ ನಿರ್ಮಿತ ಎಲೆಕ್ಟ್ರಾನಿಕ್ ಉಪಕರಣಗಳನ್ನ ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಎನ್ನಲಾಗ್ತಿದೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯದ ಜಂಟಿ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದ ತಂಡ, 4 ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿದೆ. ಎಲೆಕ್ಟ್ರಾನಿಕ್ ವಸ್ತುಗಳ ಸರಬರಾಜು ಮಾಡಲು 60 ಬಾರಿ ನೋಂದಣಿ ಮಾಡಿ, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಜಿಎಸ್ಟಿ ವಂಚನೆ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.