ಬೆಂಗಳೂರು: ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು ಕೆ ಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಅವರಿಗೆ ಮಲ್ಲೇಶ್ವರಂ ಇನ್ಸ್ಪೆಕ್ಟರ್ ಸಾಥ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಡಿಸಿಪಿ, ಜುಲೈ 19ರಂದು ಮಹಿಳೆಯೊಬ್ಬರನ್ನು ಚಿಕಿತ್ಸೆಗೆ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೋವಿಡ್ ಟೆಸ್ಟ್ ಮಾಡಿದ ನಂತರ ವರದಿ ಬರುವರೆಗೂ ಕಾಯುವಂತೆ ವೈದ್ಯರು ಹೇಳಿದ್ದರು.
ಈ ನಡುವೆ ಮಹಿಳೆ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿತು. ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆ ಇಲ್ಲದ ಕಾರಣ ಬೇರೆಡೆ ಕರೆದುಕೊಂಡು ಹೋಗುವಂತೆ ವೈದ್ಯರು ಕುಟುಂಬಸ್ಥರಿಗೆ ಸೂಚಿಸಿದ್ದರು. ಆದರೆ, ಕುಟುಂಬಸ್ಥರು ಕರೆದೊಯ್ಯದೇ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಕೆ ನಾನ್-ಕೋವಿಡ್ ವಾರ್ಡ್ನಲ್ಲೇ ಮೃತಪಟ್ಟರು. ಮೃತಪಟ್ಟ ಬಳಿಕ ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. ಆಗ ಕೋವಿಡ್ ದೃಢಪಟ್ಟಿದೆ.
ಇದನ್ನೂ ಓದಿ: ಐಸಿಯು ಇಲ್ಲ ಎಂದಿದ್ದಕ್ಕೆ ಆಸ್ಪತ್ರೆಯಲ್ಲೇ ಗಲಾಟೆ: ವೈದ್ಯರ ಮೇಲೆ ರೋಗಿ ಕುಟುಂಬಸ್ಥರಿಂದ ಹಲ್ಲೆ ಆರೋಪ!
ನಂತರ ಬಿಬಿಎಂಪಿ ಮೂಲಕ ಪ್ರೊಸಿಜರ್ ನಡೆಸಿ ಮೃತದೇಹ ಕೊಡುವುದಾಗಿ ವೈದ್ಯರು ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟಿಲ್ಲ. ಈಗ ಮೃತದೇಹ ಸಹ ಕೊಡುವುದಿಲ್ಲವಾ ಎಂದು ಮತ್ತೆ ಮಹಿಳೆ ಕುಟುಂಬದವರು ಗಲಾಟೆ ಮಾಡಿದ್ದಾರೆ. ಸದ್ಯ ವೈದ್ಯರಿಂದ ಮಾಹಿತಿ ಪಡೆದಿದ್ದೇವೆ. ಎರಡು ಕಡೆ ದೂರು ಪಡೆದು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಪಿ ಹೇಳಿದರು.