ಬೆಂಗಳೂರು : ಅಂತಾರಾಜ್ಯ ಜಲವಿವಾದ ಕಾಯ್ದೆಯನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸಂಕುಚಿತ ರಾಜಕಾರಣದ ಬದಲಿಗೆ ಹೆಚ್ಚು ಜನರಿಗೆ ನೀರು ಲಭ್ಯವಾಗಲು ಕಾಯ್ದೆಯಲ್ಲಿ ತಿದ್ದುಪಡಿ ತರಬೇಕು, ಇದಕ್ಕೆ ನದಿ ಪಾತ್ರಗಳ ನಿರ್ವಹಣೆಯೊಂದೇ ಪರಿಹಾರ ಎಂದು ಅವರು ಹೇಳಿದ್ದಾರೆ.
ಜನರಿಗೆ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ನೀರಿನ ವಿಚಾರದಲ್ಲಿ ಎಲ್ಲರೂ ಒಮ್ಮತದಿಂದ ಕಾರ್ಯನಿರ್ವಹಿಸಬೇಕು. ನೀರು ಸರಬರಾಜಿನ ಮೂಲಕ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಲು ಸಾಧ್ಯ ಎನ್ನುವುದು ನಮ್ಮ ಪ್ರಧಾನಿಗಳ ಗುರಿ, ಇದನ್ನು ಈಡೇರಿಸುವ ನಿಟ್ಟಿನಲ್ಲಿ ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು. ನೀರಾವರಿಯಲ್ಲಿ ಉನ್ನತ ಗುಣಮಟ್ಟದ ದಕ್ಷತೆ ತರಲು ಪ್ರಯತ್ನ ಮಾಡಬೇಕು. ನೀರಾವರಿ ಯಲ್ಲಿ ಸಾಕಷ್ಟು ಜಲಮಾರ್ಗಗಳಲ್ಲಿ ನೀರು ದುರುಪಯೋಗವಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಕಾಲುವೆಗಳ ಸಾಮರ್ಥ್ಯ ಶೇ 45 ರಷ್ಟಿದೆ. ಕಾಲುವೆಗಳಲ್ಲಿ ನೀರು ಹರಿಸುವ ಸಾಮರ್ಥ್ಯದಲ್ಲಿ ಶೇ. 55 ರಷ್ಟು ಅಂತರವಿದೆ. ಇವುಗಳನ್ನು ಸರಿಪಡಿಸಿದರೆ ಹೆಚ್ಚಿನ ನೀರು ಲಭ್ಯವಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ನೀರಿನ ಝರಿಗಳನ್ನು ಜೀವಂತವಾಗಿಡುವ ಜಲಾನಯನ ಯೋಜನೆಗಳು ಸೂಕ್ತವಾಗಿ ಯೋಜಿಸಲ್ಪಡದೇ, ನೀರಿನ ಹರಿವಿಗೆ ತಡೆಯೊಡ್ಡುತ್ತಿವೆ. ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಆದರೆ, ನಾವು ವಿಜ್ಞಾನ ವನ್ನು ಮರೆಯುತ್ತಿದ್ದೇವೆ. ಕನಿಷ್ಠ ಶೇ 30 ರಷ್ಟು ಸಿಹಿ ನೀರು ಸಮುದ್ರ ಸೇರಿದರೆ ಮಾತ್ರ ಶೇ 60 ರಷ್ಟು ಉಪ್ಪು ನೀರು ಆವಿಯಾಗಲು ಸಾಧ್ಯವಾಗಿ ಮಳೆಯಾಗುತ್ತದೆ. ಈ ಸರಳ ಸತ್ಯದ ಅರಿವು ಯೋಜನೆ ರೂಪಿಸುವ ಎಲ್ಲರಿಗೂ ಅರಿವಾಗಬೇಕು. ಪರಿಸರದ ಸವಾಲುಗಳನ್ನು ನಾವು ಎದುರಿಸಬೇಕಿದೆ. ನದಿಗಳು ಈಗ ಋತುಕಾಲಿಕವಾಗಿವೆ. ಸದಾ ಹರಿಯುವ ನದಿಗಳು ಇಲ್ಲದಾಗಿದೆ. ನದಿಗಳು ಸಮುದ್ರವನ್ನೇ ಸೇರುತ್ತಿಲ್ಲ. ಮಧ್ಯದಲ್ಲಿಯೇ ಒಣಗುತ್ತಿವೆ. ಈ ರೀತಿಯ ಸವಾಲುಗಳಿವೆ ಎಂದು ಅವರು ಹೇಳಿದರು.
ಜಲಜೀವನ್ ಮಿಷನ್: ಕರ್ನಾಟಕದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನ ಮಾಡಲು ಅವಿರತವಾಗಿ ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆಯಿತ್ತರು. 97.91 ಲಕ್ಷ ಗ್ರಾಮೀಣ ಮನೆಗಳಿವೆ. ಪ್ರಾರಂಭದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿತ್ತು. ಈಗಾಗಲೇ 18 ಲಕ್ಷ ಮನೆಗಳಿಗೆ ನಲ್ಲಿ ಅಳವಡಿಸಿಯಾಗಿದೆ.ಇನ್ನು ಕೆಲವೇ ತಿಂಗಳುಗಳಲ್ಲಿ ನಮ್ಮ ಗುರಿಯನ್ನು ಮುಟ್ಟಲಾಗುವುದು ಎಂದು ಹೇಳಿದ್ದಾರೆ.
ಜಲಜೀವನ್ ಮಿಷನ್ ಪ್ರಾರಂಭಗೊಂಡ ನಂತರ ಒಟ್ಟು 22 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ. 46.2 ಲಕ್ಷ ಒಟ್ಟು ವ್ಯಾಪ್ತಿ ಇದ್ದು, ಉಳಿದ 50 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸಬೇಕಿದೆ. ಮುಂದಿನ ವರ್ಷ ಇದರ ಅನುಷ್ಠಾನಕ್ಕೆ ಆಯವ್ಯಯ ದಲ್ಲಿ ಅನುದಾನವನ್ನು ಮೀಸಲಿರಿಸುವುದಾಗಿ ಹೇಳಿದ್ದಾರೆ. ಅನುಷ್ಠಾನದಲ್ಲಿ ಕೆಲವು ತೊಡಕುಗಳಿದ್ದು, ಅವುಗಳನ್ನು ನಿವಾರಿಸಲಾಗಿದೆ. ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ತಾವು ಖುದ್ದು ಯೋಜನೆಯ ಪ್ರಗತಿಯ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದರು.
ನಿಗದಿತ ಸಮಯದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ವೇಗವನ್ನು ಹೆಚ್ಚಿಸಿ 25 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸುವ ಗುರಿಯನ್ನು 2-3 ತಿಂಗಳೂಳಗೆ ಸಾಧಿಸಲಾಗುವುದು ಎಂದರು. ಮುಂದಿನ ವರ್ಷದ ಗುರಿಯನ್ನು ಶೇ 100 ರಷ್ಟು ಮುಟ್ಟಲು ಸಹ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ ಬೊಮ್ಮಾಯಿ ಹೇಳಿದ್ದಾರೆ.
ಜಲ ನಿರ್ವಹಣೆಯನ್ನು ಪುನರ್ ಪರಿಶೀಲಿಸುವ ಅಗತ್ಯ ಇದೆ : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೀರು ಸರಬರಾಜಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಜಲ ನಿರ್ವಹಣೆಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ. ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿರುವ ಪ್ರಥಮ ಪ್ರಧಾನಿಗಳು. ಜಲಜೀವನ್ ಮಿಷನ್ ಯೋಜನೆಯಲ್ಲ. ಇದೊಂದು ಗುರಿ. ಈ ಗುರಿಯನ್ನು ಮುಟ್ಟಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಇತರ ಯೋಜನೆಗಳ ಅನುಷ್ಠಾನಕ್ಕೆ ತನ್ನದೇ ಆದ ನಿಯಮಗಳಿವೆ. ಮಿಷನ್ ಮಾದರಿಯಲ್ಲಿ ಕಟ್ಟಕಡೆಯ ವ್ಯಕ್ತಿಗೆ ನೀರು ತಲುಪಿಸುವ ಹೊಣೆ ನಮ್ಮ ಮೇಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಜಲ ಯೋಜನೆಗಳನ್ನು ಸಮಗ್ರವಾಗಿ ರೂಪಿಸಬೇಕು : ಜಲ ಸಂಪನ್ಮೂಲಗಳು ರಾಜ್ಯಗಳಿಗೆ ಸೇರಲ್ಪಟ್ಟಿರುವುದು ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ನೀರು ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಸ್ಥಳೀಯವಾಗಿ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಅಭಿವೃದ್ಧಿಶೀಲ ರಾಷ್ಟ್ರವಾದ ನಮ್ಮಲ್ಲಿ, ವಿಭಿನ್ನ ಆರ್ಥಿಕ ಸ್ಥರಗಳಿವೆ. ಇವೆಲ್ಲವನ್ನೂ ಪರಿಗಣಿಸಿ ಜಲ ಯೋಜನೆಗಳನ್ನು ನಾವು ಸಮಗ್ರವಾಗಿ ರೂಪಿಸಬೇಕು ಎಂದು ಹೇಳಿದರು. ನೀರಿನೊಂದಿಗೆ ಭಾವನಾತ್ಮಕ ಸಂಬಂಧ ನಮ್ಮದಾಗಿದ್ದು, ಜಲಮೂಲಗಳ ಬಳಕೆಗೆ ವಿವಿಧ ಭಾಗೀದಾರರ ಸಮನ್ವಯವೂ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ, ಆಂಧ್ರಪ್ರದೇಶ, ಮಧ್ಯಪ್ರದೇಶ ಸಚಿವರು, ಕೇಂದ್ರ ಸರ್ಕಾರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಲಕ್ಷದ್ವೀಪದ ಅಧಿಕಾರಿಗಳು ಮತ್ತಿತರರರು ಉಪಸ್ಥಿತರಿದ್ದರು.