ಬೆಂಗಳೂರು: ಚುನಾವಣೆಗೂ ಮೊದಲು ಕೊಟ್ಟ ಆಶ್ವಾಸನೆಯಂತೆ, ನೂತನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಕಸಪಾ ಸದಸ್ಯತ್ವದ ನೋಂದಣಿ ಶುಲ್ಕದ ಇಳಿಕೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಸ್ತುತ ಆಜೀವ ಸದಸ್ಯತ್ವ ಶುಲ್ಕ ರೂ. 500 ಇದ್ದು, ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಉದ್ದೇಶದಿಂದ ಹಾಗೂ ಸಾಮಾನ್ಯರಲ್ಲಿ ಸಾಮಾನ್ಯರು ಸಹ ಪರಿಷತ್ತಿನ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಸದಸ್ಯತ್ವ ಶುಲ್ಕವನ್ನು ರೂ. 250 ಕ್ಕೆ ಇಳಿಸಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಕೋಟಿ ಆಜೀವ ಸದಸ್ಯರನ್ನು ನೋಂದಾಯಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಕ.ಸ.ಪಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 'ಭಾರತದ ಇಂದಿರಾ' ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ಸಿದ್ದರಾಮಯ್ಯ
ಈ ಹಿನ್ನೆಲೆಯಲ್ಲಿ ಮುಂದಿನ ಸಕಲ ಸದಸ್ಯರ ಸಭೆಯಲ್ಲಿ ಸದಸ್ಯತ್ವ ಶುಲ್ಕ ಕಡಿತಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡು, ಶೀಘ್ರದಲ್ಲೇ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು.
ಸದಸ್ಯರು ಸದಸ್ಯತ್ವ ನೋಂದಾಯಿಸಿಕೊಳ್ಳಲು ಸುಲಭವಾಗುವಂತೆ ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಈ ನೂತನ ಕ್ರಮಗಳನ್ನು ಹೊಸ ಆರ್ಥಿಕ ವರ್ಷದಿಂದ ಜಾರಿಗೆ ತರಲಾಗುವುದು. ಸ್ವ ಇಚ್ಛೆಯಿಂದ 500 ರೂ. ಗಳ ಶುಲ್ಕ ನೀಡಿ ಆಜೀವ ಸದಸ್ಯತ್ವ ಪಡೆಯುವುದಾದರೆ ಯಾವುದೇ ರೀತಿಯ ಅಭ್ಯಂತರವಿರುವುದಿಲ್ಲ ಎಂದು ತಿಳಿಸಿದ್ದಾರೆ.