ಬೆಂಗಳೂರು: ಟಾನಿಕ್ ಮದ್ಯ ಮಾರಾಟ ಮಳಿಗೆ ಸ್ಥಾಪನೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟದ ಅಂಗಡಿ ತೆರೆದಿರುವುದನ್ನು ಪ್ರಶ್ನಿಸಿ ಹಿರಿಯ ವಕೀಲ ಎ. ವಿ. ಅಮರನಾಥ್ ಅವರು ಸಾರ್ವಜನಿಕ ಹಿತಾ ಸಕ್ತಿ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು.

ಟಾನಿಕ್ ಮದ್ಯ ಮಾರಾಟ ಮಳಿಗೆಗೆ ಆಕ್ಷೇಪ ವ್ಯಕ್ತಪಡಿಸಿ ಅಮರ್ನಾಥ್ ಅವರು, ನಗರದ ಹೃದಯ ಭಾಗದಲ್ಲಿನ ಎಂ.ಜಿ. ರಸ್ತೆ ತುದಿಯಲ್ಲಿ ಬೃಹತ್ ಮದ್ಯ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಅಲ್ಲದೆ ಬಾರ್ ಹತ್ತಿರ ಬಾಲಭವನ ಮತ್ತು ಚರ್ಚ್ ಇವೆ. ಹೀಗಿರುವಾ ಕಾನೂನು ಪ್ರಕಾರ 100ಮೀಟರ್ ಆಸುಪಾಸು ಯಾವುದೇ ಮದ್ಯದಂಗಡಿ ತೆರೆಯುವಂತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದನ್ನ ಆಲಿಸಿದ ನ್ಯಾಯಾಲಯ ಪ್ರತಿವಾದಿಗಳಾದ ಅಬಕಾರಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಮತ್ತು ಟಾನಿಕ್ ಮಳಿಗೆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದರು.