ಬೆಂಗಳೂರು: ಫಸ್ಟ್ ನೈಟ್ ದಿನವೇ ಪತಿ ಮದ್ಯ ಸೇವಿಸಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ಎಲ್ಬಿಎಸ್ ನಗರದಲ್ಲಿ ಬೆಳಕಿಗೆ ಬಂದಿದೆ.
ಪತ್ನಿಗೆ ಮೊದಲ ರಾತ್ರಿಯಲ್ಲಿ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಆರೋಪದಡಿ ಭರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 29 ರಂದು ಗುರು ಹಿರಿಯರು ನಿಶ್ಚಯಿಸಿದಂತೆ ವಿವಾಹ ನಡೆದಿತ್ತು. ವಿವಾಹದ ಬಳಿಕ ಭರತ್, ಫಸ್ಟ್ ನೈಟ್ ವೇಳೆ ಕುಡಿದು ಬಂದಿದ್ದ, ಇದರಿಂದ ಬೇಸತ್ತ ಪತ್ನಿ ಆತನೊಂದಿಗೆ ಇರಲು ನಿರಾಕರಿಸಿದ್ದಾಳೆ ಎನ್ನಲಾಗ್ತಿದೆ.

ಈ ಹಿನ್ನೆಲೆ ಭರತ್ ಹಾಗೂ ಆತನ ಪೋಷಕರು ಯುವತಿಗೆ ಚಿತ್ರಹಿಂಸೆ ನೀಡುವ ಜೊತೆಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಹಲ್ಲೆ ಕುರಿತು ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದ ಬಳಿಕ ಭರತ್ಗೆ ಈ ಹಿಂದೆಯೇ ಬೇರೆ ಯುವತಿ ಜೊತೆ ವಿವಾಹವಾಗಿತ್ತು ಎಂಬುದು ಬಯಲಾಗಿದೆ. ಮೊದಲೇ ಮದುವೆಯಾಗಿರುವ ವಿಷಯ ಮುಚ್ಚಿಟ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಭರತ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.