ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಜನರು ನಿರಂತರವಾಗಿ ದೌರ್ಜನ್ಯಕ್ಕೆ ಬಲಿಯಾಗುತ್ತಲೇ ಇದ್ದಾರೆ. ಇದೀಗ ಅಪ್ರಾಪ್ತ ಬಾಲಕನಿಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ರಾಜಾಜಿನಗರ ಪೊಲೀಸರು ಬಂಧಿಸಿ, ಜೈಲಿಗೆ ದೂಡಿದ್ದಾರೆ.
ವಿಶ್ವನಾಥ್ ಬಂಧಿತ ಆರೋಪಿ. ಬಾಲಕನೊಬ್ಬನ ಬೆತ್ತಲೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇನೆಂದು ಬ್ಲಾಕ್ ಮೇಲ್, ಹಣ ದೋಚಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಬ್ಲಾಕ್ಮೇಲ್ ಮೂಲಕ ಪಡೆದಿದ್ದ 5 ಲಕ್ಷ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
![INSTAGRAM](https://etvbharatimages.akamaized.net/etvbharat/images/kn-bng-0520419-instagram-bhavya-7204498_20042019132225_2004f_01395_681.jpg)
ಏನಿದು ಪ್ರಕರಣ?
ಅಪ್ರಾಪ್ತ ಹುಡುಗನೊಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆ ಇನ್ಸ್ಟಗ್ರಾಂನಲ್ಲಿ ಚಾಟ್ ಮಾಡುತ್ತಿದ್ದಾಗ ನಗ್ನ ಫೋಟೋ ಕಳಿಸುವಂತೆ ಆಕೆ ಕೇಳಿದ್ದಾಳೆ. ಅಂತೆಯೆ ಬಾಲಕ ಆಕೆಯ ಇನ್ಸ್ಸ್ಟಗ್ರಾಂ ಅಕೌಂಟ್ಗೆ ಬೆತ್ತಲೆ ಫೋಟೋ ಕಳಿಸಿದ್ದ. ಆರೋಪಿ ವಿಶ್ವನಾಥ್ಗೆ ಬಾಲಕಿ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಿ ಅದರಲ್ಲಿದ್ದ ಈ ಅಪ್ರಾಪ್ತನ ಬೆತ್ತಲೆ ಫೋಟೋ ಸಿಕ್ಕಿತ್ತು. ಫೋಟೋವನ್ನು ಸೇವ್ ಮಾಡಿಕೊಂಡ ಆರೋಪಿ, ತಕ್ಷಣ ಬಾಲಕನಿಗೆ ಇನ್ಸ್ಟಾಗ್ರಾಂ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ.
ಫ್ರೆಂಟ್ ರಿಕ್ವೆಸ್ಟ್ ಊರ್ಜಿತವಾಗುತ್ತಿದ್ದಂತೆ ಈ ಫೋಟೋವನ್ನು ಬಾಲಕನಿಗೆ ಕಳುಹಿಸಿ, ತಾನು ಕೇಳಿದಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇರಿಸಿದ್ದ. ಇಲ್ಲವಾದರೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದ. ಬಾಲಕ ಮನೆಯಲ್ಲಿದ್ದ ಹಣ ಹಾಗೂ ಆಭರಣ ಕದ್ದು, ಆರೋಪಿಗೆ 7 ಲಕ್ಷದಷ್ಟು ಹಣ ನೀಡಿದ್ದ ಎಂದು ತಿಳಿದುಬಂದಿದೆ.
ಇಷ್ಟಾದರೂ ಮತ್ತೆ ಮತ್ತೆ ಹಣ ನೀಡಬೇಕೆಂದು ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ಬೇಸತ್ತ ಬಾಲಕ ಕೊನೆಗೆ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಇನ್ಸ್ಪೆಕ್ಟರ್ ರಾಮರೆಡ್ಡಿ ತಮ್ಮ ಟೀಂ ಮೂಲಕ ಆರೋಪಿ ಹಿಡಿಯಲು ಸ್ಕೆಚ್ ಹಾಕಿದ್ದರು. ಹಣ ಕೊಡುವ ನೆಪದಲ್ಲಿ ಆರೋಪಿ ವಿಶ್ವನಾಥ್ನನ್ನು ಕರೆಸಿ, ಆನಂತರ ದಾಳಿ ಮಾಡಿ ಬಲೆಗೆ ಕೆಡವಿದ್ದಾರೆ. ಸದ್ಯ ಆರೋಪಿಯನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.