ಬೆಂಗಳೂರು: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಜೆ ಹಳ್ಳಿ (ದೇವರ ಜೀವನಹಳ್ಳಿ) ಹಾಗೂ ಕೆ ಜಿ ಹಳ್ಳಿ (ಕಾಡುಗೊಂಡನಗಳ್ಳಿ) ಠಾಣೆಯಲ್ಲಿ ಕ್ರಮವಾಗಿ 6 ಮತ್ತು 3 ಪ್ರಕರಣಗಳು ದಾಖಲಾಗಿವೆ.
ಡಿಜೆ ಹಳ್ಳಿ ಇನ್ಸ್ಪೆಕ್ಟರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಕುರಿತು ದೂರು ನೀಡಿದ್ದಾರೆ. ಇದರಲ್ಲಿ ಅಪ್ನಾನ್, ಮುಜಾಮಿಲ್ ಪಾಷಾ, ಸೈಯದ್ ಮಸೂದ್, ಅಯಾಜ್ ಆರೋಪಿಗಳಾಗಿದ್ದಾರೆ. ಗಲಭೆಗೆ ಎಸ್ಡಿಪಿಐ ಕೈವಾಡ ಇರುವುದು ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ.
ಒಂದು ಧರ್ಮದ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರೆನ್ನಲಾದ ಆರೋಪಿ ನವೀನ್ ಕುಮಾರ್ ಅವರ ಮನೆ ಗಲಭೆಯಲ್ಲಿ ಮನೆ ಧ್ವಂಸವಾಗಿದೆ. ಗಲಭೆ ನಿಯಂತ್ರಿಸಲು ತೆರಳಿದ್ದ ಪೊಲೀಸರ ಮೇಲೆಯೇ ಉದ್ರಿಕ್ತರು ಹಲ್ಲೆ ನಡೆಸಿದ್ದರು. ನವೀನ್ ತಾಯಿ ಜಯಂತಿ ಅವರು ತಮ್ಮ ಹೇಳಿಕೆಯನ್ನು ಪೊಲೀಸರಿಗೆ ನೀಡಿದ್ದಾರೆ.
ಮೂರು ದಿನಗಳ ಹಿಂದೆ ಮನೆಯಲ್ಲಿದ್ದ ಚಿನ್ನಾಭರಣದ ಜೊತೆಗೆ ನವೀನ್ ಮೊಬೈಲ್ ಕೂಡ ಕಳ್ಳತನವಾಗಿದೆ. ನವೀನ್ ಮೊಬೈಲ್ನಿಂದ ಉದ್ದೇಶಪೂರ್ವಕವಾಗಿಯೇ ಯಾರೋ ಈ ರೀತಿ ಪೋಸ್ಟ್ ಮಾಡಿದ್ದಾರೆ ಎಂದು ಜಯಂತಿ ಆರೋಪಿಸಿದ್ದಾರೆ.
ಹಾಗೆಯೇ ನವೀನ್ ಮನೆ ಸಂಪೂರ್ಣ ಸುಟ್ಟಿರುವ ಕಾರಣ ಮನೆಯಲ್ಲಿ ಎಷ್ಟು ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂಬುದರ ತನಿಖೆ ಮುಂದುವರೆದಿದೆ. ಹಾಗೆಯೇ ನವೀನ್ ವಿರುದ್ಧ ಕೂಡ ಪ್ರಕರಣ ದಾಖಲಾಗಿದ್ದು, ಮೊಬೈಲ್ ನಿಜವಾಗಿಯೂ ಕಳ್ಳತನವಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.