ಬಳ್ಳಾರಿ: ತುಂಗಾಭದ್ರಾ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ನಿರ್ಧರಿಸಿದ್ದು, 10 ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಹಾಗಾಗಿ ಈ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಿಸಲು ಮತ್ತು ಅಗತ್ಯವಿರುವೆಡೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಶನಿವಾರ ಸಂಜೆ 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಜಲಾಶಯದಿಂದ ಹರಿಬಿಡಲಾಗಿತ್ತು. ಅದನ್ನು ಹಂತ ಹಂತವಾಗಿ ಈಗಾಗಲೇ 1.70 ಲಕ್ಷ ಕ್ಯೂಸೆಕ್ ನೀರನ್ನು ತುಂಗಾಭದ್ರಾ ಜಲಾಶಯದಿಂದ ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ಪಾತ್ರದ ಕೆಲ ಪ್ರದೇಶಗಳು ಹಾಗೂ ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ಕಂಪ್ಲಿ-ಗಂಗಾವತಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಸ್ಥಗಿತಗೊಂಡಿದೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಮತ್ತು ಕಂಪ್ಲಿ ತಾಲೂಕಿನ ಐದೈದು ಹಳ್ಳಿಗಳು ಮುಳುಗಡೆ ಭೀತಿ ಎದುರಿಸುತ್ತಿದ್ದು, ಈಗಾಗಲೇ ಜಿಲ್ಲಾಡಳಿತದಿಂದ ನಿಯೋಜಿಸಿದ ತಂಡವು ಗ್ರಾಮಗಳಲ್ಲಿ ಅಗತ್ಯ ಜನಜಾಗೃತಿ ಮೂಡಿಸಿ ಗ್ರಾಮದಲ್ಲಿನ ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪಡಿತರ ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೊಸಪೇಟೆ ಉಪವಿಭಾಗ ಅಧಿಕಾರಿ ಪಿ.ಎನ್.ಲೋಕೇಶ ತಿಳಿಸಿದರು.
ಅಧಿಕಾರಿಗಳ ತಂಡದೊಂದಿಗೆ ಕಂಪ್ಲಿ ಶಾಸಕ ಗಣೇಶ್ ಜತೆಗೂಡಿ ಕಂಪ್ಲಿ ಸೇತುವೆಯ ನೀರಿನ ಸ್ಥಿತಿಗತಿ ಪರಿಶೀಲಿಸಿ ಮಾತನಾಡಿ ಅವರು, ಜಲಾಶಯ ಈ ಬಾರಿ ತುಂಬುತ್ತದೆಯೋ ಇಲ್ಲವೋ ಎಂಬ ಆತಂಕ ಇತ್ತು. ಅದನ್ನು ಆ ಭಗವಂತ ನಿವಾರಿಸಿ ತ್ರಿವಳಿ ಜಿಲ್ಲೆಗಳ ರೈತರ ಮೊಗದಲ್ಲಿ ಸಂತಸ ಮೂಡಿದೆ. ರಾಜ್ಯದ ಅರ್ಧ ಭಾಗವೇ ನೆರೆಹಾವಳಿಯಿಂದ ತತ್ತರಿಸುತ್ತಿರುವುದು ನೋವು ಉಂಟು ಮಾಡಿದೆ. ಕಂಪ್ಲಿ-ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗುತ್ತಿದೆ. ಇದು ತುಂಬಾ ಹಳೆಯ ಸೇತುವೆಯಾಗಿದ್ದು, ಇದನ್ನು ಹೊಸದಾಗಿ ನಿರ್ಮಿಸುವುದು ಅಗತ್ಯವಿದೆ. ಈಗಾಗಿ ಹೊಸದಾಗಿ ನಿರ್ಮಾಣಕ್ಕೆ ಯೋಜನೆ ತಯಾರಿಸಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹೊಸ ಸೇತುವೆ ನಿರ್ಮಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದರು.
ಪರಿಹಾರ ಪದ್ಧತಿ ಬದಲಾವಣೆಗೆ ಆಗ್ರಹ:
ಮಳೆಯಿಂದ ಹಾಗೂ ಜಲಾಶಯದಿಂದ ನೀರು ಬಿಟ್ಟ ಸಂದರ್ಭದಲ್ಲಿ ಸರ್ಕಾರ ನೀಡುವ ಪರಿಹಾರ ಪದ್ಧತಿ ತುಂಬಾ ಹಳೆಯದಾಗಿದೆ. ತುಂಬಾ ಹಾನಿಯಾದರೂ ಕಡಿಮೆ ಪರಿಹಾರ ನೀಡಲಾಗುತ್ತಿದ್ದು, ಇದು ಬದಲಾವಣೆಯಾಗಬೇಕು. ಬೆಳೆಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿದ್ದು, ಅಗತ್ಯ ಪರಿಹಾರ ನೀಡಲಿದೆ ಎಂದು ಶಾಸಕ ಗಣೇಶ್ ತಿಳಿಸಿದರು.
ಇನ್ನು 3 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಕಂಪ್ಲಿ ಸೇತುವೆ ಬಳಿಯ 500 ಕುಟುಂಬಗಳ ಸ್ಥಳಾಂತರಕ್ಕೆ ಮನವೊಲಿಸಿ ಅವರನ್ನು ಬೇರೆಡೆ ಸ್ಥಳಾಂತರಿಸಲಾಗುವುದು. ಅವರಿಗೆ ಸುಸಜ್ಜಿತ ಮನೆ ನಿರ್ಮಿಸಿ ಕೊಡಲಾಗುವುದು ಎಂದರು. ಈ ವೇಳೆ ತಹಶೀಲ್ದಾರ್ ರೇಣುಕಾ ಸೇರಿದಂತೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.