ವಿಜಯನಗರ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತುಂಗಾಭದ್ರಾ ಜಲಾಶಯ ಅವಧಿಗೆ ಮುನ್ನವೇ ಈ ವರ್ಷ ಭರ್ತಿಯಾಗಿದೆ. ಜಲಾಶಯದಲ್ಲಿ ಹಗಲಿನ ವೇಳೆ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಧಾರೆ ಒಂದು ಕಡೆಯಾದರೆ ಇನ್ನೊಂದೆಡೆ ಸಂಜೆ ವೇಳೆ ಜಲಾಶಯಕ್ಕೆ ಅಳವಡಿಸಿದ ಬಣ್ಣ ಬಣ್ಣದ ವಿದ್ಯುತ್ ಅಲಂಕಾರ ನಿಜವಾಗಿಯೂ ನೋಡುಗರ ಕಣ್ಮನ ಸೆಳೆಯುವುದರ ಜೊತೆಗೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಈ ತುಂಗಾಭದ್ರಾ ಜಲಾಶಯ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶದ ಕೆಲ ಜಿಲ್ಲೆಗಳಿಗೂ ಜೀವನಾಡಿ. ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯದ ಒಳ ಹರಿವು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 1633 ಅಡಿ ಇದ್ದು, ಇದೀಗ 1632 ಅಡಿಗಷ್ಟು ನೀರು ತುಂಬಿದೆ.
ಈ ಪರಿಣಾಮ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿ ಹಾಗೂ ಕಾಲುವೆಗಳಿಗೆ ಬಿಡಲಾಗುತ್ತಿದೆ. ಜಲಾಶಯದ 30 ಗೇಟ್‌ಗಳ ಮೂಲಕ ನೀರು ಹೊರಬಿಡಲಾಗುತ್ತಿದೆ. ಈ ವೇಳೆ ಧುಮ್ಮಿಕ್ಕುವ ನೀರಿನ ಮನಮೋಹಕ ದೃಶ್ಯ ನೋಡಲು ಎರಡು ಕಣ್ಣು ಸಾಲುವುದಿಲ್ಲ. ರಾತ್ರಿಯಾಗುತ್ತಿದ್ದಂತೆ ಜಲಾಶಯ ಬಣ್ಣ ಬಣ್ಣದ ವಿದ್ಯುತ್ ಅಲಂಕಾರದಿಂದ ಕಂಗೊಳಿಸುವುದನ್ನು ನೋಡಲು ಸಹ ಜನರು ಮುಗಿಬೀಳುತ್ತಾರೆ.
ಈ ವರ್ಷ ಪ್ರವಾಸಿಗರ ವೀಕ್ಷಣೆಗಾಗಿ ಜಲಾಶಯದ 33 ಗೇಟ್ಗಳಿಗೆ ಒಂದೊಂದು ಬಣ್ಣದ ಲೈಟ್ಗಳನ್ನು ಆಳವಡಿಸಲಾಗಿದೆ. ನೀರು ಧುಮ್ಮಿಕ್ಕುವಾಗ ಪ್ರತಿ ಗೇಟ್ನಿಂದಲೂ ಒಂದೊಂದು ಬಣ್ಣವಾಗಿ ನೀರು ಧರೆಗಿಳಿಯುತ್ತದೆ. ವಿಶ್ವವಿಖ್ಯಾತ ಹಂಪಿಗೆ ಬರುವ ಪ್ರವಾಸಿಗರು ಕೂಡ ಜಲಾಶಯವನ್ನು ನೋಡಲು ಬರುತ್ತಾರೆ. ಜಲಾಶಯದ ಮೇಲ್ಭಾಗದಲ್ಲಿ ವೈಕುಂಠ ಗೆಸ್ಟ್ ಹೌಸ್ ವ್ಯೂ ಪಾಯಿಂಟ್ನಿಂದ ವೀಕ್ಷಿಸಿದರೆ, ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುತ್ತದೆ.
ಇಲ್ಲಿಗೆ ಬಂದವರಿಗೆ ಕೇವಲ ಜಲಾಶಯ ಮಾತ್ರವಲ್ಲ, ಜಲಾಶಯದಲ್ಲಿರುವ ವಿಶಾಲವಾದ ಉದ್ಯಾನವನ, ಜಿಂಕೆ ಪಾರ್ಕ್, ಬಣ್ಣ ಬಣ್ಣದ ಕಾರಂಜಿ, ಫಿಶ್ ಮ್ಯೂಸಿಕ್ ಕೂಡ ನೋಡುಗರಿಗೆ ಮುದ ನೀಡುತ್ತವೆ. ಈ ವರ್ಷ ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾಗಿದ್ದು, ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಜಲಾಶಯ ಭರ್ತಿಯಾಗಿದ್ದರಿಂದ ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ, ರೈತರಿಗೂ ಖುಷಿ ನೀಡಿದೆ.
ಇದನ್ನೂ ಓದಿ : ಆಲಮಟ್ಟಿಯ 18 ಗೇಟ್‌ಗಳ ಮೂಲಕ ನೀರು ಬಿಡುಗಡೆ; ಹೆಚ್ಚಿದ ಪ್ರವಾಹ ಭೀತಿ